arogya sanjeevini order

40 ವರ್ಷ ಮೇಲ್ಪಟ್ಟ ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ ಕಡ್ಡಾಯ; ಸರ್ಕಾರದ ಹೊಸ ಆದೇಶ

40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ (Annual Health Checkup) ಸೌಲಭ್ಯವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರ ವೆಚ್ಚ ಮತ್ತು ಷರತ್ತುಗಳ ವಿವರ ಇಲ್ಲಿದೆ.

  • *40 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ ಸೌಲಭ್ಯ.
  • *ಕರ್ನಾಟಕ ಆರೋಗ್ಯ ಸಂಜೀವಿನಿ (KASS) ಯೋಜನೆಯಡಿ ನಗದು ರಹಿತ ಚಿಕಿತ್ಸೆ ಲಭ್ಯ.
  • *ಪುರುಷರಿಗೆ ₹2,000 ಹಾಗೂ ಮಹಿಳೆಯರಿಗೆ ₹2,200 ತಪಾಸಣಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.

ಬೆಂಗಳೂರು: ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್. 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ‘ವಾರ್ಷಿಕ ವೈದ್ಯಕೀಯ ತಪಾಸಣೆ’ (Annual Health Checkup) ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಒದಗಿಸಲಾಗಿರುವ ‘ಪ್ರಿವೆಂಟಿವ್ ಹೆಲ್ತ್ ಚೆಕಪ್’ (Preventive Health Checkup) ಮಾದರಿಯಲ್ಲಿಯೇ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ (KASS) ಈ ಸೌಲಭ್ಯವನ್ನು ನಗದು ರಹಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಯೋಜನೆಯ ಹಿನ್ನೆಲೆ ಮತ್ತು ಉದ್ದೇಶ

ಸರ್ಕಾರಿ ನೌಕರರು ಕೆಲಸದ ಒತ್ತಡ ಹಾಗೂ ಆಧುನಿಕ ಜೀವನಶೈಲಿಯಿಂದಾಗಿ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅನೇಕರು ಈ ಕಾಯಿಲೆಗಳ ಅರಿವಿಲ್ಲದೆ ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಗಂಭೀರ ರೋಗಗಳಿಗೆ ಒಳಗಾಗುತ್ತಿದ್ದಾರೆ. ಇದನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ, ಸೂಕ್ತ ಔಷಧೋಪಚಾರದ ಮೂಲಕ ಅನಾರೋಗ್ಯ ತಡೆಗಟ್ಟುವ ಉದ್ದೇಶದಿಂದ ಈ ವಾರ್ಷಿಕ ತಪಾಸಣಾ ಸೌಲಭ್ಯವನ್ನು ಜಾರಿಗೆ ತರಲಾಗಿದೆ.

01.10.2025 ರಿಂದ ಜಾರಿಗೆ ಬಂದಿರುವ KASS ಯೋಜನೆಗೆ ಒಟ್ಟು 3,76,955 ನೌಕರರು ಸ್ವ-ಇಚ್ಛೆಯಿಂದ (Opt-in) ಸೇರ್ಪಡೆಯಾಗಿದ್ದಾರೆ.

ತಪಾಸಣೆಯಲ್ಲಿ ಏನೆಲ್ಲಾ ಪರೀಕ್ಷೆಗಳಿರಲಿವೆ?

ಸರ್ಕಾರಿ ಆದೇಶದ ಅನ್ವಯ ಕೆಳಕಂಡ ನಿರ್ದಿಷ್ಟ ಹಾಗೂ ಅತ್ಯಾವಶ್ಯಕ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಳ್ಳಬಹುದು:

  • ಸಾಮಾನ್ಯ ಪರೀಕ್ಷೆ (General): ನಾಡಿದೊತ್ತಡ, ರಕ್ತದೊತ್ತಡ, ತೂಕ, BMI.
  • ಸಿಸ್ಟಮಿಕ್ ಪರೀಕ್ಷೆ: ಉಸಿರಾಟ, ಹೃದಯ, ಹೊಟ್ಟೆ ಹಾಗೂ ನರಮಂಡಲ (CNS) ಪರೀಕ್ಷೆ, ದಂತ ತಪಾಸಣೆ.
  • ಇತರೆ ತಪಾಸಣೆಗಳು: ಕಣ್ಣಿನ ತಪಾಸಣೆ (Visual Equity, Tonometry), ENT ತಪಾಸಣೆ, ಸರ್ಜಿಕಲ್ ತಪಾಸಣೆ.
  • ರಕ್ತ ಮತ್ತು ಮೂತ್ರ ಪರೀಕ್ಷೆ: ಹಿಮೋಗ್ರಾಮ್, ರಕ್ತದ ಸಕ್ಕರೆ ಅಂಶ (Fasting, PPBS, HBA1C), ಕೊಲೆಸ್ಟ್ರಾಲ್/ಲಿಪಿಡ್ ಪ್ರೊಫೈಲ್, ಮೂತ್ರ ಪರೀಕ್ಷೆ.
  • ಯಕೃತ್ ಮತ್ತು ಮೂತ್ರಪಿಂಡ: ಲಿವರ್ ಫಂಕ್ಷನ್ ಟೆಸ್ಟ್ (ALT, AST, ಬಿಲಿರುಬಿನ್), ಕಿಡ್ನಿ ಫಂಕ್ಷನ್ ಟೆಸ್ಟ್ (ಯೂರಿಯಾ, ಕ್ರಿಯೇಟಿನೈನ್).
  • ವಿಶೇಷ ಪರೀಕ್ಷೆಗಳು: ಥೈರಾಯ್ಡ್ (TSH, T3, T4), ECG, ಎದೆ ಭಾಗದ X-ray, ಸಂಪೂರ್ಣ ಹೊಟ್ಟೆಯ ಅಲ್ಟ್ರಾಸೌಂಡ್ (Ultrasound).
  • ಮಹಿಳೆಯರಿಗೆ ಪ್ರತ್ಯೇಕ: ಸ್ತ್ರೀರೋಗ ತಪಾಸಣೆ (Pelvic & Breast exam), ಪ್ಯಾಪ್ ಸ್ಮಿಯರ್ (PAP Smear), ಮ್ಯಾಮೋಗ್ರಾಮ್.
  • ಪುರುಷರಿಗೆ ಪ್ರತ್ಯೇಕ: PSA ಪರೀಕ್ಷೆ.
sanjeevini

ತಪಾಸಣೆಯ ದರ ಮತ್ತು ಷರತ್ತುಗಳು

ಸರ್ಕಾರವು ಈ ವಾರ್ಷಿಕ ಆರೋಗ್ಯ ತಪಾಸಣೆಗಳಿಗೆ ಸಂಚಿತ ದರಗಳನ್ನು (Consolidated Rates) ನಿಗದಿಪಡಿಸಿದ್ದು, ಈ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ:

  • ಪುರುಷ ನೌಕರರಿಗೆ: ಗರಿಷ್ಠ ₹2,000/-.
  • ಮಹಿಳಾ ನೌಕರರಿಗೆ: ಗರಿಷ್ಠ ₹2,200/-.

ಪ್ರಮುಖ ಷರತ್ತುಗಳು (Conditions):

  1. ಅರ್ಹತೆ: ಈ ಸೌಲಭ್ಯವು ಕೇವಲ 40 ವರ್ಷ ಮೀರಿದ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸುತ್ತದೆ. ನೌಕರರ ಅವಲಂಬಿತ ಕುಟುಂಬದ ಸದಸ್ಯರು ಈ ಸೌಲಭ್ಯಕ್ಕೆ ಅರ್ಹರಾಗಿರುವುದಿಲ್ಲ.
  2. Opt-in ಕಡ್ಡಾಯ: KASS ಯೋಜನೆಗೆ ಸ್ವ-ಇಚ್ಛೆಯಿಂದ ಒಳಪಡದ (Opt-out ಆದ) ನೌಕರರು ಈ ಸೌಲಭ್ಯ ಪಡೆಯುವಂತಿಲ್ಲ.
  3. ಆಸ್ಪತ್ರೆಗಳು: ಸರ್ಕಾರಿ ಆಸ್ಪತ್ರೆಗಳು ಹಾಗೂ KASS ಯೋಜನೆಯಡಿ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ತಪಾಸಣೆ ಪಡೆಯಬೇಕು
  4. ನಿಯಮ: ಎಲ್ಲಾ ತಪಾಸಣೆಗಳನ್ನು ಒಂದೇ ಸಂಸ್ಥೆಯಲ್ಲಿ/ಆಸ್ಪತ್ರೆಯಲ್ಲಿ ಪಡೆದು, ಒಂದೇ ಕ್ಲೇಮ್‌ನಲ್ಲಿ ಇತ್ಯರ್ಥಪಡಿಸಬೇಕು

ಈ ಕುರಿತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ (SAST) ಕಾರ್ಯಕಾರಿ ನಿರ್ದೇಶಕರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (DPAR) ನಿರ್ದೇಶನ ನೀಡಿದೆ

ವರದಿ: ಸನತ್ ದೇಸಾಯಿ, ನೀಡ್ಸ್ ಆಫ್ ಪಬ್ಲಿಕ್ – ಬೆಂಗಳೂರು

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories