ಏತ ನೀರಾವರಿಯಿಂದ ತುಂಬುವ ಕೆರೆಗಳನ್ನು ಇ-ಟೆಂಡರ್ ಮೂಲಕ ಹರಾಜು ಹಾಕುವ ಸರ್ಕಾರದ ನಿರ್ಧಾರದ ವಿರುದ್ಧ ಹರಪನಹಳ್ಳಿಯಲ್ಲಿ ಮೀನುಗಾರರ ಆಕ್ರೋಶ. ಸಿಎಂ ಡಿ.ಕೆ. ಶಿವಕುಮಾರ್ ನಿವಾಸದ ಮುಂದೆ ಪ್ರತಿಭಟನೆ ಎಚ್ಚರಿಕೆ…
- *ಮೀನುಗಾರರ ಆಕ್ರೋಶ: ಕೆರೆಗಳ ಇ-ಟೆಂಡರ್ ನಿರ್ಧಾರ ಖಂಡಿಸಿ ಮೀನುಗಾರರ ಸಭೆ.
- *ಬಂಡವಾಳಶಾಹಿಗಳ ಪರ: ಇ-ಟೆಂಡರ್ನಿಂದ ಸ್ಥಳೀಯ ಮೀನುಗಾರರ ಬದುಕು ಮೂರಾಬಟ್ಟೆ.
- *ಸತ್ಯಾಗ್ರಹದ ಎಚ್ಚರಿಕೆ: ನಿರ್ಧಾರ ಕೈಬಿಡದಿದ್ದರೆ ಸಿಎಂ ಡಿಕೆಶಿ ನಿವಾಸದ ಮುಂದೆ ಸತ್ಯಾಗ್ರಹ.
ಹರಪನಹಳ್ಳಿ: ಕೆರೆಗಳ ಇ-ಟೆಂಡರ್ ರದ್ದತಿಗೆ ಆಗ್ರಹ; ಸಿಎಂ ಡಿ.ಕೆ. ಶಿವಕುಮಾರ್ ನಿವಾಸದ ಮುಂದೆ ಸತ್ಯಾಗ್ರಹದ ಎಚ್ಚರಿಕೆ
ಹರಪನಹಳ್ಳಿ: ಏತ ನೀರಾವರಿಯಿಂದ ತುಂಬುತ್ತಿರುವ ಕೆರೆಗಳನ್ನು ಬೃಹತ್ ನೀರಾವರಿ ಇಲಾಖೆಗೆ ಸೇರಿಸಿ ಇ-ಟೆಂಡರ್ (E-Tender) ಮೂಲಕ ಹರಾಜು ಹಾಕುವ ರಾಜ್ಯ ಸರ್ಕಾರದ ಆದೇಶವನ್ನು ವಿರೋಧಿಸಿ ಮೀನುಗಾರರ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಜನವಿರೋಧಿ ನಿರ್ಧಾರವನ್ನು ಕೂಡಲೇ ಕೈಬಿಡದಿದ್ದರೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೀನುಗಾರರ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಮೀನುಗಾರರ ಎದೆಯ ಮೇಲೆ ಅರಮನೆ ಕಟ್ಟಲಿದ್ದೀರಾ?\
ಸಭೆಯಲ್ಲಿ ಮಾತನಾಡಿದ ಹರಪನಹಳ್ಳಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಸಣ್ಣ ತಿಮ್ಮಣ್ಣ, “ನಾಲ್ಕೈದು ದಶಕಗಳಿಂದ ಕೇವಲ ಮೀನುಗಾರಿಕೆಯನ್ನೇ ನಂಬಿ ನಮ್ಮ ಕುಟುಂಬಗಳು ಬದುಕುತ್ತಿವೆ. ನಮಗೆ ಪರ್ಯಾಯ ಕೆಲಸ ಗೊತ್ತಿಲ್ಲ. ಹಿಂದಿನ ಸರ್ಕಾರಗಳು ಮೀನುಗಾರಿಕೆ ಸಹಕಾರ ಸಂಘಗಳನ್ನು ಸ್ಥಾಪಿಸಿ, ಅದರ ಮೂಲಕ ನಮಗೆ ಬದುಕಲು ಅವಕಾಶ ಕಲ್ಪಿಸಿದ್ದವು. ಆದರೆ ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಂದಿರುವ ಇ-ಟೆಂಡರ್ ವ್ಯವಸ್ಥೆ, ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಡ ಮೀನುಗಾರರ ಕಣ್ಣೀರಿನಲ್ಲಿ, ಅವರ ಎದೆಯ ಮೇಲೆ ನೀವು ಅರಮನೆ ಕಟ್ಟಲಿದ್ದೀರಾ?” ಎಂದು ಖಾರವಾಗಿ ಪ್ರಶ್ನಿಸಿದರು.
ಇ-ಟೆಂಡರ್ ನಿಂದ ಬಂಡವಾಳಶಾಹಿಗಳಿಗೆ ಮಾತ್ರ ಲಾಭ
ರೈತ ಸಂಘದ ಅಧ್ಯಕ್ಷ ದ್ಯಾಮಜ್ಜಿ ಹನುಮಂತಪ್ಪ ಮಾತನಾಡಿ, “ಸಹಕಾರ ಸಂಘಗಳ ವ್ಯಾಪ್ತಿ ಮೀರಿದ ಹಲವು ಕೆರೆಗಳನ್ನ ಈಗಾಗಲೇ ಹರಾಜು ಪ್ರಕ್ರಿಯೆಯಲ್ಲಿ ನೀಡಲಾಗಿದೆ. ಮೀನುಗಾರರಿಗೆ ನವೀಕರಣಕ್ಕೆ ಹಣ ಹೊಂದಿಸಲು ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಇ-ಟೆಂಡರ್ ತಂದರೆ, ಎಲ್ಲೋ ನಗರಗಳಲ್ಲಿ ಕುಳಿತ ಬಂಡವಾಳಶಾಹಿಗಳು ಗುತ್ತಿಗೆ ಪಡೆಯುತ್ತಾರೆ. ಸ್ಥಳೀಯ ಮೀನುಗಾರರು ಕೇವಲ ಮೂಕಪ್ರೇಕ್ಷಕರಾಗಿ ಬದುಕಬೇಕೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ತಕ್ಷಣ ಇ-ಟೆಂಡರ್ ನಿರ್ಧಾರ ಹಿಂಪಡೆಯಬೇಕು. ಬದಲಾಗಿ ಈಗಿರುವ ಹೆಕ್ಟೇರ್ಗೆ ನಿಗದಿಪಡಿಸಿದ ಹಣವನ್ನು ಕೊಂಚ ಹೆಚ್ಚಿಸಿ, ಸ್ಥಳೀಯ ಮೀನುಗಾರರ ಸಹಕಾರ ಸಂಘಗಳಿಗೆಯೇ ಮುಂದುವರಿಸಲು ಅವಕಾಶ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸದ ಎದುರು ಬೃಹತ್ ಸತ್ಯಾಗ್ರಹ ಕೂರುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಲಕ್ಷಾಂತರ ಮೀನುಗಾರರ ಬದುಕು ಬೀದಿಗೆ: ಅಂಬಿ ರಾಜಪ್ಪ
ಮುಖಂಡ ಅಂಬಿ ರಾಜಪ್ಪ ಮಾತನಾಡಿ, “ರಾಜ್ಯದಲ್ಲಿ ಬಡವರಿಗಾಗಿ ಉಚಿತ ಯೋಜನೆಗಳನ್ನು ರೂಪಿಸಿರುವುದು ಶ್ಲಾಘನೀಯ. ಆದರೆ ಕೆರೆಗಳನ್ನು ಇ-ಟೆಂಡರ್ ಮಾಡುವುದರಿಂದ ಕೇವಲ ಮೀನುಗಾರರಲ್ಲ, ಲಕ್ಷಾಂತರ ಮೀನುಗಾರ ಕುಟುಂಬಗಳು ಬೀದಿಗೆ ಬೀಳಲಿವೆ. ರಾಜ್ಯದ ಬಡ ಜನರ ಮೇಲೆ ಸರ್ಕಾರಕ್ಕೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಎಲ್ಲಾ ಕೆರೆಗಳ ಇ-ಟೆಂಡರ್ ಪ್ರಕ್ರಿಯೆಯನ್ನು ಕೈಬಿಟ್ಟು ಯಥಾಸ್ಥಿತಿ ಕಾಪಾಡಬೇಕು,” ಎಂದು ಒತ್ತಾಯಿಸಿದರು.

ಈ ಬೇಡಿಕೆ ಈಡೇರದಿದ್ದರೆ ಲಕ್ಷಾಂತರ ಮೀನುಗಾರರು ಬೀದಿಗಿಳಿದು ಬೃಹತ್ ಪ್ರತಿಭಟನೆ ಮಾಡುವುದು ನಿಶ್ಚಿತ ಎಂದು ಅವರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದರು.
ಈ ಪೂರ್ವಭಾವಿ ಸಭೆಯಲ್ಲಿ ಮೀನುಗಾರಿಕೆ ಸಹಕಾರ ಸಂಘದ ಕಾರ್ಯದರ್ಶಿ ರವಿ ಎನ್., ಅಗ್ರಹಾರದ ಶಿವಪ್ಪ, ಆನಂದ, ಹಾಗೂ ಕಂಚಿಕೆರೆ, ಅರಸೀಕೆರೆ, ಮಾದಾಪುರ ಮೀನುಗಾರಿಕೆ ಸಹಕಾರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ವರದಿ: ಮಾರುತಿ ತಳವಾರ, ನೀಡ್ಸ್ ಆಫ್ ಪಬ್ಲಿಕ್
ಇದೇ ರೀತಿಯ ನಿಖರ ಸುದ್ದಿಗಳಿಗೆ ನಮ್ಮ ನೀಡ್ಸ್ ಪಬ್ಲಿಕ್ ಆಪ್ ಡೌನ್ಲೋಡ್ App ಮಾಡಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಮಾರುತಿ ತಳವಾರ್ ಅವರು ‘Needs of Public’ ಜಾಲತಾಣದ ಹಾವೇರಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಬಿಎ, ಬಿ.ಎಡ್ ಹಾಗೂ ಪತ್ರಿಕೋದ್ಯಮದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ಮೊದಲು ಸುಮಾರು ಐದು ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಸಮಾಜಮುಖಿ ವಿಚಾರಗಳು ಮತ್ತು ಜನಪರ ಸಮಸ್ಯೆಗಳ ಕುರಿತು ವಿಶೇಷ ಆಸಕ್ತಿ ಹೊಂದಿದ್ದಾರೆ.
ಸ್ಥಳೀಯ ಆಡಳಿತ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕೃಷಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಆಧರಿಸಿದ ವರದಿಗಳನ್ನು ಸಿದ್ಧಪಡಿಸುವಲ್ಲಿ ಅನುಭವ ಹೊಂದಿರುವ ಇವರು, ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಓದುಗರಿಗೆ ತಲುಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಹಾವೇರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಮುಖ ಬೆಳವಣಿಗೆಗಳು, ಜನಸಮಸ್ಯೆಗಳು ಹಾಗೂ ನೆಲಮಟ್ಟದ ಸುದ್ದಿಗಳನ್ನು ವರದಿ ಮಾಡುವಲ್ಲಿ ವಿಶೇಷ ಒಲವು ಹೊಂದಿದ್ದಾರೆ.


WhatsApp Group




Leave a Reply