datti upanyasa haveri

ಹಾವೇರಿ: ದಿ. ಡಾ. ಭೋಜರಾಜ ಪಾಟೀಲ ದತ್ತಿ ನಿಧಿ ಕಾರ್ಯಕ್ರಮ; ಸಂಶೋಧನೆಗೆ ಅನ್ವರ್ಥವಾಗಿದ್ದ ಅವರ ಬದುಕು

ಹಾವೇರಿಯಲ್ಲಿ ನಡೆದ ದಿ. ಡಾ. ಭೋಜರಾಜ ಪಾಟೀಲ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಖ್ಯಾತ ಸಂಶೋಧಕರ ಅಪಾರ ಕೊಡುಗೆಗಳನ್ನು ಸ್ಮರಿಸಲಾಯಿತು. ‘ನಾಗರಖಂಡ-70’ ಮತ್ತು ‘ಗ್ರಾಮ ಚರಿತ್ರೆ ಕೋಶ’ದಂತಹ ಕೃತಿಗಳ ಬಗ್ಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

  • *ಕಾರ್ಯಕ್ರಮ: ಹಾವೇರಿಯಲ್ಲಿ ದಿ. ಡಾ. ಭೋಜರಾಜ ಪಾಟೀಲ ದತ್ತಿ ನಿಧಿ ಸಮಾರಂಭ.
  • *ಸಂಶೋಧನೆ: ‘ನಾಗರಖಂಡ-70’ ಕೃತಿಯು ದಕ್ಷಿಣ ಭಾರತದ ಇತಿಹಾಸಕ್ಕೆ ಹೊಸ ಬೆಳಕು.
  • *ಹಸ್ತಪ್ರತಿ: ಭೋಜರಾಜರ ಅಪ್ರಕಟಿತ ಹಸ್ತಪ್ರತಿಗಳನ್ನು ಪ್ರಕಟಿಸಲು ಕಸಾಪ ನಿರ್ಧಾರ.

ಹಾವೇರಿ: ದಿ. ಡಾ. ಭೋಜರಾಜ ಪಾಟೀಲ ದತ್ತಿ ನಿಧಿ ಕಾರ್ಯಕ್ರಮ; ಸಂಶೋಧನೆಗೆ ಅನ್ವರ್ಥವಾಗಿದ್ದ ಅವರ ಬದುಕು

ಹಾವೇರಿ: “ಸಂಶೋಧನೆ ಎಂಬುದು ಅಪಾರ ಪರಿಶ್ರಮ, ತಾಳ್ಮೆ ಮತ್ತು ಸತ್ಯಸಂಧತೆಯನ್ನು ಬಯಸುತ್ತದೆ. ಹೊಸ ಇತಿಹಾಸ ಸೃಷ್ಟಿಯಾಗುವ ಜವಾಬ್ದಾರಿಯ ಜೊತೆಗೆ ಯಾವುದೇ ಪೂರ್ವಾಗ್ರಹ ಪೀಡಿತರಾಗದೇ ವಿಶ್ಲೇಷಿಸುವ ಅಗತ್ಯವಿದೆ. ಇಂತಹ ಸವಾಲನ್ನು ಸಮರ್ಥವಾಗಿ ಎದುರಿಸಿ, ಸಂಶೋಧನೆಗೆ ಅನ್ವರ್ಥವಾಗಿ ಬದುಕಿದವರು ದಿ. ಡಾ. ಭೋಜರಾಜ ಪಾಟೀಲ” ಎಂದು ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಬಣ್ಣಿಸಿದರು.

ನಗರದ ಗೆಳೆಯರ ಬಳಗದ ಮಣಿಭಾಯಿ ಲೋಡಾಯಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಖ್ಯಾತ ಸಂಶೋಧಕ ದಿ. ಡಾ. ಭೋಜರಾಜ ಪಾಟೀಲ ಇವರ ದತ್ತಿ ನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಾಗರಖಂಡ-70’ ದಕ್ಷಿಣ ಭಾರತದ ಇತಿಹಾಸಕ್ಕೆ ಬೆಳಕು

ಸಂಶೋಧನೆಗೆ ಎಂದೂ ರಾಜಿಯಾಗದ ಡಾ. ಭೋಜರಾಜರು ಸಂಶೋಧಿಸಿದ ‘ನಾಗರಖಂಡ-೭೦’ ಕೃತಿಯು ಇಡೀ ದಕ್ಷಿಣ ಭಾರತದ ಇತಿಹಾಸದ ಹಲವು ಮಜಲುಗಳಿಗೆ ಬೆಳಕು ಚೆಲ್ಲಿದೆ. ಹಾವೇರಿ ಜಾನಪದ ವಿಶ್ವವಿದ್ಯಾಲಯ ಪ್ರಕಟಿಸಿದ ‘ಹಾವೇರಿ ಗ್ರಾಮ ಚರಿತ್ರೆ ಕೋಶ’ ಗ್ರಂಥವು ಇವರ ಕರ್ತೃತ್ವ ಶಕ್ತಿಗೆ ಅತ್ಯುತ್ತಮ ಉದಾಹರಣೆಯಾಗಿದೆ. “ಒಂದು ಸಂಸ್ಥೆ ಹತ್ತಾರು ಜನರೊಂದಿಗೆ ಸೇರಿ ಮಾಡುವ ಕೆಲಸವನ್ನು ಒಬ್ಬರೇ ವ್ಯಕ್ತಿ ಮಾಡಿರುವುದು ಶ್ಲಾಘನೀಯ. ಕೇವಲ ಸಂಶೋಧನೆ ಮಾತ್ರವಲ್ಲದೇ ನಾಟಕ, ಕಥೆ, ಧಾರ್ಮಿಕ ಸಾಹಿತ್ಯದಲ್ಲಿಯೂ ಅವರ ರಚನೆ ಗಮನಾರ್ಹ” ಎಂದು ಡಾ. ವಿಜಯಕುಮಾರ ಶ್ಲಾಘಿಸಿದರು.

ನಾಮವಿಜ್ಞಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ

ಚಿತ್ರದುರ್ಗದ ಸಂಶೋಧಕ ಹಾಗೂ ಸಾಹಿತಿ ರಾಜಶೇಖರಪ್ಪ ಮಾತನಾಡಿ, “ಚಾರಿತ್ರಿಕ ನೋಟಗಳ ಮೂಲಕ ಜನಸಾಮಾನ್ಯರ ಬದುಕಿನ ಮಗ್ಗುಲುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ತೋರಿಸಿಕೊಟ್ಟ ಡಾ. ಭೋಜರಾಜ ಪಾಟೀಲರು ದೇಸಿ ಅಧ್ಯಯನಗಳ ಶ್ರೇಷ್ಠ ಚಿಂತಕರಾಗಿದ್ದಾರೆ. ಅವರು ಸಂಶೋಧಿಸಿದ ‘ಹಿರೇಕೆರೂರು ತಾಲ್ಲೂಕು ಗ್ರಾಮನಾಮ ಅಧ್ಯಯನ ಚರಿತೆ’ಯು ನಾಮವಿಜ್ಞಾನ ಕ್ಷೇತ್ರಕ್ಕೆ ಒಂದು ಅತ್ಯಮೂಲ್ಯ ಕೊಡುಗೆಯಾಗಿದೆ” ಎಂದು ಅಭಿಪ್ರಾಯಪಟ್ಟರು.

ವೈಜ್ಞಾನಿಕ ಹಿನ್ನೆಲೆಯಲ್ಲಿ ಶಾಸನಗಳ ಅಧ್ಯಯನ

ರಟ್ಟಿಹಳ್ಳಿ ಪ್ರಿಯದರ್ಶಿನಿ ಕಾಲೇಜಿನ ಉಪನ್ಯಾಸಕ ಚಾಮರಾಜ ಕಮ್ಮಾರ ಮಾತನಾಡಿ, “ಡಾ. ಭೋಜರಾಜ ಪಾಟೀಲರು ಸಿದ್ಧ ಮಾದರಿಯ ಸಂಶೋಧನೆಗೆ ಅಂಟಿಕೊಳ್ಳದೇ ವಿನೂತನ ಪ್ರಯೋಗಗಳಿಗೆ ಕೈ ಹಾಕಿ ಯಶಸ್ವಿಯಾದರು. ಶಾಸನಗಳ ಅಧ್ಯಯನವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಸಂಶೋಧಿಸಿ, ಪ್ರಕಟಿಸಿದರು. ಇಂದು ಹಾವೇರಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಶಾಸನಗಳು ಬೆಳಕಿಗೆ ಬಂದಿದ್ದರೆ, ಅದಕ್ಕೆ ಭೋಜರಾಜ ಪಾಟೀಲರ ಶ್ರಮವೇ ಪ್ರಮುಖ ಕಾರಣ” ಎಂದರು.

ಅಪ್ರಕಟಿತ ಹಸ್ತಪ್ರತಿಗಳ ಪ್ರಕಟಣೆಗೆ ಕಸಾಪ ನಿರ್ಧಾರ

ತಾಲ್ಲೂಕು ಕಸಾಪ ಅಧ್ಯಕ್ಷ ವಾಯ್.ಬಿ. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, “ಸಂಶೋಧಕ ಭೋಜರಾಜ ಪಾಟೀಲರು ಸಂಗ್ರಹಿಸಿದ ಹಲವಾರು ಹಸ್ತಪ್ರತಿಗಳು ಇನ್ನೂ ಅಪ್ರಕಟಿತವಾಗಿವೆ. ಅವುಗಳನ್ನು ಸಂಗ್ರಹಿಸುವ ಕಾರ್ಯವನ್ನು ಕಸಾಪ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಅವುಗಳನ್ನು ಅಧಿಕೃತವಾಗಿ ಪ್ರಕಟಿಸುವ ಕೆಲಸ ಮಾಡಲಾಗುವುದು. ಸಾರ್ವಜನಿಕರ ಬಳಿ ಅವರ ಹಸ್ತಪ್ರತಿಗಳು, ತಾಡೋಲೆಗಳು ಇದ್ದರೆ ಅವುಗಳನ್ನು ಪ್ರಕಟಣೆಗೆ ನೀಡಬೇಕು” ಎಂದು ಮನವಿ ಮಾಡಿದರು.

ಗಣ್ಯರ ಉಪಸ್ಥಿತಿ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪದ ಕೋಶಾಧ್ಯಕ್ಷ ಎಸ್.ಎನ್. ದೊಡ್ಡಗೌಡರ ಮಾತನಾಡಿ, ಡಾ. ಭೋಜರಾಜರು ಹಂಸಭಾವಿಯಂತಹ ಸಣ್ಣ ಪಟ್ಟಣದಲ್ಲಿ ಉದ್ಯೋಗ ಮಾಡಿದರೂ, ಜಿಲ್ಲೆಯ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದರು ಎಂದರು.

datti haveri

ಕಾರ್ಯಕ್ರಮದಲ್ಲಿ ದತ್ತಿದಾನಿ ಲೀಲಾವತಿ ಭೋಜರಾಜ ಪಾಟೀಲ ಮಾತನಾಡಿದರು. ಸಾಹಿತಿ ಸತೀಶ ಕುಲಕರ್ಣಿ ದತ್ತಿದಾನಿಗಳನ್ನು ಪರಿಚಯಿಸಿದರೆ, ಗಾಯತ್ರಿ ನಾಯಕ ಅತಿಥಿಗಳ ಪರಿಚಯ ಮಾಡಿದರು. ಸಮಾರಂಭದಲ್ಲಿ ಡಾ. ಗುಹೇಶ್ವರ ಪಾಟೀಲ, ಪರಶುರಾಮ ಕರ್ಜಗಿ, ಸಿ.ಎಸ್. ಮರಳಿಹಳ್ಳಿ, ಶಂಕರ ಸುತಾರ, ಮಾಲತೇಶ ಕರ್ಜಗಿ, ನಾಗರಾಜ ಹುಡೇದ, ಮತ್ತಿತರರು ಉಪಸ್ಥಿತರಿದ್ದರು. ಅಕ್ಕಮ್ಮ ಹಾನಗಲ್ಲ ಪ್ರಾರ್ಥಿಸಿದರು, ಎಸ್.ಆರ್. ಹಿರೇಮಠ ಸ್ವಾಗತಿಸಿದರು, ಪುಷ್ಪಾ ಶಲವಡಿಮಠ ನಿರೂಪಿಸಿದರು ಹಾಗೂ ಕೊನೆಯಲ್ಲಿ ಡಾ. ಅಶ್ವಿನಿ ಪಾಟೀಲ ವಂದಿಸಿದರು.

ವರದಿ: ವರದಿ: ಮಾರುತಿ ತಳವಾರ, ನೀಡ್ಸ್ ಆಫ್ ಪಬ್ಲಿಕ್

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories