ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಯೋಜನೆ (KPS Magnet Scheme) ಮೂಲಕ 40,000 ಸರ್ಕಾರಿ ಶಾಲೆಗಳನ್ನು ಮುಚ್ಚುವ ಮತ್ತು ವಿಲೀನ ಮಾಡುವ ಹುನ್ನಾರ ವಿರೋಧಿಸಿ ದಾವಣಗೆರೆಯ ಹೊನ್ನಾಳಿ ತಾಲೂಕಿನ ಕೆಂಗಲಹಳ್ಳಿ ಮತ್ತು ಬನ್ನಿಕೋಡು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಡ ಮಕ್ಕಳ ಶಿಕ್ಷಣ ಕಸಿಯುವ ನೀತಿ ವಿರುದ್ಧ ಎಐಡಿಎಸ್‌ಒ ಹೋರಾಟ.
- *ಶಾಲೆ ವಿಲೀನಕ್ಕೆ ವಿರೋಧ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವಿಕೆಗೆ ಗ್ರಾಮಸ್ಥರ ಆಕ್ರೋಶ.
- *40,000 ಶಾಲೆಗಳಿಗೆ ಕುತ್ತು: 5 ಕಿ.ಮೀ ವ್ಯಾಪ್ತಿಯ 7 ಶಾಲೆಗಳನ್ನು ಒಂದೇ ಮ್ಯಾಗ್ನೆಟ್ ಶಾಲೆಗೆ ವಿಲೀನ ಮಾಡುವ ಸರ್ಕಾರದ ನೀತಿ.
- *ಕೌಶಲ್ಯದ ಹೆಸರಲ್ಲಿ ಕೂಲಿ: 6ನೇ ತರಗತಿಯಿಂದಲೇ ವೃತ್ತಿ ಶಿಕ್ಷಣದ ನೆಪದಲ್ಲಿ ಬಡ ಮಕ್ಕಳನ್ನು ಕಾರ್ಮಿಕರನ್ನಾಗಿಸುವ ಹುನ್ನಾರ.
- *ಉಗ್ರ ಹೋರಾಟದ ಎಚ್ಚರಿಕೆ: ಸೋಮವಾರ ಹೊನ್ನಾಳಿ ಬಿಇಒ ಕಚೇರಿ ಮುಂದೆ ಬೃಹತ್ ಪ್ರತಿಭಟನೆಗೆ ನಿರ್ಧಾರ.
ದಾವಣಗೆರೆ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪ್ರತಿಭಟನೆ; ಸರ್ಕಾರಿ ಶಾಲೆಗಳ ವಿಲೀನಕ್ಕೆ ಹಳ್ಳಿಗಳಲ್ಲಿ ಭಾರಿ ಆಕ್ರೋಶ
ದಾವಣಗೆರೆ: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ’ಯ (KPS Magnet Scheme) ವಿರುದ್ಧ ಇದೀಗ ಹಳ್ಳಿ ಹಳ್ಳಿಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಕಡಿಮೆ ದಾಖಲಾತಿ ನೆಪವೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮತ್ತು ವಿಲೀನ ಮಾಡುವ ಸರ್ಕಾರದ ನಡೆಯನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ನೇತೃತ್ವದಲ್ಲಿ ಹೊನ್ನಾಳಿ ತಾಲೂಕಿನ ಕೆಂಗಲಹಳ್ಳಿ ಮತ್ತು ಬನ್ನಿಕೋಡು ಗ್ರಾಮಸ್ಥರು, ಪೋಷಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.
ಯಾವುದೇ ಕಾರಣಕ್ಕೂ ನಮ್ಮ ಊರಿನ ಶಾಲೆಯನ್ನು ವಿಲೀನ ಮಾಡಲು ನಾವು ಬಿಡುವುದಿಲ್ಲ. ಬಡವರ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಸರ್ಕಾರದ ಈ ಕರಾಳ ನೀತಿಯನ್ನು ಹಿಂಪಡೆಯಬೇಕು, ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
40,000 ಶಾಲೆಗಳಿಗೆ ಬೀಗ: ಬಡವರ ಶಿಕ್ಷಣಕ್ಕೆ ಕುತ್ತು!
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಪ್ರಮುಖರಾದ ಪೂಜಾ ನಂದಿಹಳ್ಳಿ, ಸರ್ಕಾರದ ಶೈಕ್ಷಣಿಕ ನೀತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಬರೋಬ್ಬರಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸಂಚು ರೂಪಿಸಿದೆ. ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವಂತಹ ಕನಿಷ್ಠ 7 ಶಾಲೆಗಳನ್ನು ಒಂದು ‘ಮ್ಯಾಗ್ನೆಟ್ ಶಾಲೆಗೆ’ ವಿಲೀನ ಮಾಡುವ ಈ ಅವೈಜ್ಞಾನಿಕ ನೀತಿಯು ದೊಡ್ಡ ಸಂಖ್ಯೆಯ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ. ಕಳೆದ 15 ವರ್ಷದಲ್ಲಿ ರಾಜ್ಯದ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದನ್ನು ಬಿಟ್ಟು, ದಾಖಲಾತಿ ಇಲ್ಲ ಎಂಬ ನೆಪವೊಡ್ಡಿ ಶಾಲೆಗಳಿಗೆ ಬೀಗ ಹಾಕಲು ಅಕ್ಟೋಬರ್ 15ರಂದು ಸುತ್ತೋಲೆ ಹೊರಡಿಸಿದೆ, ಎಂದು ದೂರಿದರು.
61 ಸಾವಿರ ಹುದ್ದೆ ಖಾಲಿ: ಆಶ್ವಾಸನೆಗಳಲ್ಲೇ ಕಾಲಹರಣ
ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಸರ್ಕಾರದ ಇಬ್ಬಗೆಯ ನೀತಿಯನ್ನು ಪೂಜಾ ನಂದಿಹಳ್ಳಿ ಟೀಕಿಸಿದರು. “ಕೆಪಿಎಸ್ ಶಾಲೆಗೆ ಬಸ್ ಬಿಡುತ್ತೇವೆ, ಆಯಾಗಳನ್ನು ಕೊಡುತ್ತೇವೆ ಎಂದು ಹೇಳುತ್ತಿರುವ ರಾಜ್ಯ ಸರ್ಕಾರಕ್ಕೆ ವಾಸ್ತವದ ಅರಿವಿಲ್ಲ. ರಾಜ್ಯಾದ್ಯಂತ 61,000 ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡಲು ಯಾವುದೇ ಯೋಜನೆಯಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ಶಿಕ್ಷಕರ ನೇಮಕಾತಿ ಬಗ್ಗೆ ದೊಡ್ಡದಾಗಿ ಮಾತನಾಡಿದ್ದವರು, ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ನೇಮಕಾತಿ ಮಾಡಿಲ್ಲ. ಕಳೆದ ಬಜೆಟ್‌ನಲ್ಲಿ 15,000 ಶಿಕ್ಷಕರನ್ನು ತೆಗೆದುಕೊಳ್ಳುತ್ತೇವೆ ಎಂದಿದ್ದರು, ಆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಈಗ 2,500 ಕಂಪ್ಯೂಟರ್ ಶಿಕ್ಷಕರನ್ನಾಗಿ ಡಿಪ್ಲೊಮ ಮತ್ತು ಇಂಜಿನಿಯರಿಂಗ್ ಓದಿದವರನ್ನು ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಇವೆಲ್ಲವೂ ಕೇವಲ ಆಶ್ವಾಸನೆಗಳಾಗಿಯೇ ಉಳಿಯಲಿವೆಯೇ?” ಎಂದು ಪ್ರಶ್ನಿಸಿದರು.

ಒಂದನೇ ತರಗತಿಯಿಂದಲೇ ಕಂಪ್ಯೂಟರ್: ಮೂಲ ಶಿಕ್ಷಣಕ್ಕೆ ಕೊಡಲಿ ಪೆಟ್ಟು
ಕೆಪಿಎಸ್ ಶಾಲೆಗಳಲ್ಲಿ 1ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ, 3ನೇ ತರಗತಿಯಿಂದ ಎಐ (AI) ಶಿಕ್ಷಣ ನೀಡುವ ಸರ್ಕಾರದ ಯೋಜನೆಯು ಅವೈಜ್ಞಾನಿಕವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
“ಒಂದನೇ ತರಗತಿಯ ಯಾವ ಮಗುವಿಗೂ ಕಂಪ್ಯೂಟರ್ ಶಿಕ್ಷಣದ ಅವಶ್ಯಕತೆಯಿಲ್ಲ. ಆ ಮಗು ಮೊದಲು ಭಾಷೆಯನ್ನು ಓದುವ, ಬರೆಯುವ, ಅಕ್ಷರಗಳನ್ನು ಗುರುತಿಸುವ ಹಾಗೂ ಗಣಿತ, ಸಮಾಜ ವಿಜ್ಞಾನದ ಮೂಲಭೂತ ಅಂಶಗಳನ್ನು ಕಲಿಯಬೇಕು. 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್ ಎಂದು ಹೇಳುವ ಸರ್ಕಾರವೇ, ಈಗ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಸ್ಕ್ರೀನ್ ಮುಂದೆ ಕೂರಿಸುತ್ತಿದೆ. ಇದು ಮಕ್ಕಳನ್ನು ಡಿಜಿಟಲ್ ವ್ಯಸನಿಗಳನ್ನಾಗಿ ಮಾಡುವ ಹುನ್ನಾರ,” ಎಂದು ಪೂಜಾ ನಂದಿಹಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.
ಕೌಶಲ್ಯದ ಹೆಸರಲ್ಲಿ ಬಡಮಕ್ಕಳನ್ನು ‘ಕೂಲಿ’ಗಳನ್ನಾಗಿಸುವ ಸಂಚು
ಶಾಲೆಗಳಲ್ಲಿ 6ನೇ ತರಗತಿಯಿಂದ ಕೌಶಲ್ಯಾಭಿವೃದ್ಧಿ ಹೆಸರಿನಲ್ಲಿ “ಸ್ಕಿಲ್ ಅಟ್ ಸ್ಕೂಲ್” (Skill at School) ಮತ್ತು ಅರ್ನ್ ವೈಲ್ ಲರ್ನಿಂಗ್ (Earn while learning) ಯೋಜನೆ ಜಾರಿಗೊಳಿಸುತ್ತಿರುವುದರ ವಿರುದ್ಧವೂ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಶಾಲೆಗಳಲ್ಲಿ ಅಡಿಕೆ ಸುಲಿಯುವುದು, ಹತ್ತಿ ಬಿಡಿಸುವುದು, ಪ್ಲಂಬಿಂಗ್, ಎಲೆಕ್ಟ್ರಿಕಲ್, ಟೈಲರಿಂಗ್ ಕೆಲಸವನ್ನು ಕಲಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಹೇಳಿದ್ದಾರೆ. ಶ್ರೀಮಂತರ ಮಕ್ಕಳು ಗಣಿತ, ವಿಜ್ಞಾನ ಕಲಿತು ವೈದ್ಯರು, ಇಂಜಿನಿಯರ್‌ಗಳಾಗುತ್ತಿದ್ದರೆ, ಬಡವರ ಮಕ್ಕಳನ್ನು ವೃತ್ತಿಶಿಕ್ಷಣದ ಹೆಸರಿನಲ್ಲಿ ಸಣ್ಣ ವಯಸ್ಸಿನಲ್ಲೇ ಅಗ್ಗದ ಕಾರ್ಮಿಕರನ್ನಾಗಿಸಲು (Child Labour) ಸರ್ಕಾರ ಸಂಚು ರೂಪಿಸಿದೆ. ಇದು ಬಡಮಕ್ಕಳು ಉನ್ನತ ಹುದ್ದೆಗೇರುವ ಕನಸನ್ನು ಚಿವುಟಿ ಹಾಕುವ ಕರಾಳ ನೀತಿಯಾಗಿದೆ, ಎಂದು ಆಕ್ರೋಶ ಹೊರಹಾಕಿದರು.
ನಮ್ಮೂರ ಶಾಲೆ ಉಳಿಸಲು ಉಗ್ರ ಹೋರಾಟ: ಗ್ರಾಮಸ್ಥರ ಎಚ್ಚರಿಕೆ
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಪೋಷಕರು ಯಾವುದೇ ಕಾರಣಕ್ಕೂ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
- ಕೆಂಗಲಹಳ್ಳಿ ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ: ನಮ್ಮ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 1947ರ ಸ್ವಾತಂತ್ರ್ಯದ ನೆರಳಿನಲ್ಲಿ ಸ್ಥಾಪನೆಯಾದ ಐತಿಹಾಸಿಕ ಶಾಲೆ. ಇಲ್ಲಿ ಓದಿದ ಅನೇಕರು ಲಾಯರ್, ಡಾಕ್ಟರ್, ಇಂಜಿನಿಯರ್ ಆಗಿದ್ದಾರೆ. ಈ ಶಾಲೆಯನ್ನು ವಿಲೀನ ಮಾಡಲು ನಾವು ಬಿಡುವುದಿಲ್ಲ. ಇದೇ ಸೋಮವಾರ ಹೊನ್ನಾಳಿಯ ಬಿಇಒ (BEO) ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ.
- ಬನ್ನಿಕೋಡು ಎಸ್‌ಡಿಎಂಸಿ ಅಧ್ಯಕ್ಷ ವಸಂತ್: ನಮ್ಮ ಶಾಲೆಯನ್ನು ಉಳಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ. ಈಗಾಗಲೇ ಹೊನ್ನಾಳಿ ತಾಲೂಕಿನ ಎಲ್ಲಾ ಎಸ್.ಡಿ.ಎಂ.ಸಿ ಅಧ್ಯಕ್ಷರ ಸಭೆ ಮಾಡಿದ್ದು, ಶಾಸಕರ ಗಮನಕ್ಕೂ ತಂದಿದ್ದೇವೆ. ಶಾಲೆ ಮುಚ್ಚುವ ಸರ್ಕಾರದ ಯಾವುದೇ ನಿರ್ಧಾರವನ್ನು ನಾವು ಒಪ್ಪುವುದಿಲ್ಲ.
ಪ್ರತಿಭಟನೆಯಲ್ಲಿ ಕೆಂಗಲಹಳ್ಳಿ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷೆ ಮೇಘ, ಪೋಷಕರಾದ ಸಾವಿತ್ರ, ನೇತ್ರ, ವಿದ್ಯಾ, ಪವಿತ್ರ, ದೀಪ, ನಾಗರಾಜ ಹಾಗೂ ಬನ್ನಿಕೋಡು ಗ್ರಾಮಸ್ಥರಾದ ದೇವಪ್ಪ, ಗಣೇಶ್, ಮಂಜುನಾಥ್, ಪ್ರಕಾಶ್, ಬಿ.ಕೆ. ಮಹೇಶ್, ಶಿಲ್ಪಾ, ಸುನಿತಾ, ಲತಾ, ಶಶಿಕಲಾ, ಪುಟ್ಟಪ್ಪ ಸೇರಿದಂತೆ ನೂರಾರು ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಭಾಗವಹಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್
ಇದೇ ರೀತಿಯ ನಿಖರ ಸುದ್ದಿಗಳಿಗೆ ನಮ್ಮ ನೀಡ್ಸ್ ಪಬ್ಲಿಕ್ ಆಪ್ ಡೌನ್ಲೋಡ್ App ಮಾಡಿ
ಈ ಮಾಹಿತಿಗಳನ್ನು ಓದಿ:

ಲಿಂಗರಾಜ ರಾಮಪುರ (Lingaraj Ramapur) ಅವರು NeedsOfPublic.in ನ ಸಂಸ್ಥಾಪಕರು ಮತ್ತು ಪ್ರಧಾನ ಸಂಪಾದಕರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಐಟಿ (BCA, MCA) ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ (M.A) ಪದವಿ ಪಡೆದಿರುವ ಇವರು ತಾಂತ್ರಿಕ ಮತ್ತು ಮಾಧ್ಯಮ ರಂಗದ ಅಪರೂಪದ ಸಂಗಮವಾಗಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮಕ್ಕೆ ಕಾಲಿಡುವ ಮುನ್ನ ಬೆಂಗಳೂರಿನ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ Infosys ಮತ್ತು Concentrix ನಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಕೆಲಸ ಮಾಡಿದ ಜಾಗತಿಕ ಅನುಭವ ಇವರಿಗಿದೆ. 2017 ರಿಂದ ಮಾಧ್ಯಮ ರಂಗದಲ್ಲಿದ್ದು, ಕಳೆದ 9 ವರ್ಷಗಳಿಂದ ಡೇಟಾ-ಆಧಾರಿತ ವರದಿಗಾರಿಕೆ, ನಿಖರವಾದ ಫ್ಯಾಕ್ಟ್-ಚೆಕಿಂಗ್ ಮತ್ತು ಸಾರ್ವಜನಿಕರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವ ಸಂಪಾದಕೀಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.


WhatsApp Group




Leave a Reply