ರಾಣೇಬೆನ್ನೂರು ತಾಲೂಕಿನ ಮೆಡ್ಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕರೆಂಟ್ ಶಾಕ್‌ಗೆ ಒಳಗಾದ ಎಸ್ಕಾಮ್ ಸಿಬ್ಬಂದಿಗೆ ತಕ್ಷಣ ಚಿಕಿತ್ಸೆ ದೊರೆಯದ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ..
ಮುಖ್ಯಾಂಶಗಳು:
- ಕಾಯಂ ವೈದ್ಯರಿಲ್ಲ: 25 ಸಾವಿರ ಜನಸಂಖ್ಯೆ ಇರುವ ತಾಲೂಕಿನ ಅತಿದೊಡ್ಡ ಗ್ರಾಮ ಮೆಡ್ಲೇರಿಯ ಪಿಎಚ್‌ಸಿಯಲ್ಲಿ ಕಾಯಂ ವೈದ್ಯರಿಲ್ಲದೆ ರೋಗಿಗಳ ಪರದಾಟ.
- ಆತಂಕಕಾರಿ ಘಟನೆ: ಕರ್ತವ್ಯದ ವೇಳೆ ಕರೆಂಟ್ ಶಾಕ್ ಹೊಡೆದ ಎಸ್ಕಾಮ್ ಪವರ್‌ಮ್ಯಾನ್‌ಗೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ಸಿಗದೆ ಆಕ್ರೋಶ.
- ಗ್ರಾಮಸ್ಥರ ಆಗ್ರಹ: ಕೂಡಲೇ ಕಾಯಂ ವೈದ್ಯರನ್ನು ನೇಮಿಸಿ, ದಿನದ 24 ಗಂಟೆಯೂ ಆರೋಗ್ಯ ಸೇವೆ ಕಲ್ಪಿಸುವಂತೆ ಶಾಸಕರಿಗೆ ಯುವ ಸಂಘದವರ ಒತ್ತಾಯ.
ವೈದ್ಯರಿಲ್ಲದ ಮೆಡ್ಲೇರಿ ಆಸ್ಪತ್ರೆ: ಕರೆಂಟ್ ಶಾಕ್ ತಗುಲಿದರೂ ಸಿಗದ ಚಿಕಿತ್ಸೆ, ಆಡಳಿತ ವ್ಯವಸ್ಥೆ ವಿರುದ್ಧ ಗ್ರಾಮಸ್ಥರ ಹಿಡಿಶಾಪ
ರಾಣೇಬೆನ್ನೂರು: ಸರ್ಕಾರಗಳು ಗ್ರಾಮೀಣಾಭಿವೃದ್ಧಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ಹಣ ವ್ಯಯಿಸುತ್ತಿದ್ದರೂ, ತಾಲೂಕಿನ ಅತಿದೊಡ್ಡ ಗ್ರಾಮವಾದ ‘ಮೆಡ್ಲೇರಿ’ಯಲ್ಲಿ ಮಾತ್ರ ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿವೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (PHC) ಕಾಯಂ ವೈದ್ಯರಿಲ್ಲದೆ ರೋಗಿಗಳು ನಿತ್ಯ ಪರದಾಡುವಂತಾಗಿದೆ.
ಸುಮಾರು 25 ಸಾವಿರ ಜನಸಂಖ್ಯೆ ಹೊಂದಿರುವ ಮೆಡ್ಲೇರಿ ಗ್ರಾಮದ ಪಿಎಚ್‌ಸಿಯಲ್ಲಿ ಪ್ರಸ್ತುತ ಕೇವಲ ಮೂವರು ಸಿಬ್ಬಂದಿ ಮಾತ್ರ ಇದ್ದಾರೆ. ಒಬ್ಬ ಫಾರ್ಮಸಿಸ್ಟ್, ಒಬ್ಬ ಸ್ಟಾಫ್ ನರ್ಸ್ ಹಾಗೂ ಒಬ್ಬರು ಲ್ಯಾಬ್ ಟೆಕ್ನಿಷಿಯನ್ ಬಲದಿಂದಲೇ ಇಡೀ ಆಸ್ಪತ್ರೆ ನಡೆಯುತ್ತಿದೆ. ಆಸ್ಪತ್ರೆಯ ಕಚೇರಿ ಕಾರ್ಯಗಳನ್ನು ನಿರ್ವಹಿಸಲು ಓರ್ವ ದ್ವಿತೀಯ ದರ್ಜೆ ಸಹಾಯಕರು ಸಹ ಇಲ್ಲದಿರುವುದು ದುರಂತ.

ತಾಲೂಕು ಆರೋಗ್ಯಾಧಿಕಾರಿಗಳ ಮಾಹಿತಿ ಪ್ರಕಾರ, ವಾರದಲ್ಲಿ ಎರಡು ದಿನ ಬಂದು ಹೋಗುವಂತೆ ಹೊನ್ನತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಇಲ್ಲಿಗೆ ನಿಯೋಜಿಸಲಾಗಿದೆ. ಆದರೆ, ಅವರು ಸಹ ಸರಿಯಾಗಿ ಬರುತ್ತಿಲ್ಲ. ಮಳೆಗಾಲ ಪ್ರಾರಂಭವಾಗಿದ್ದು ಹವಾಮಾನ ವೈಪರೀತ್ಯದಿಂದಾಗಿ ಜ್ವರ, ಶೀತದಂತಹ ರೋಗರುಜಿನಗಳು ಜನರನ್ನು ಕಾಡುತ್ತಿವೆ. ಇಂತಹ ಸಮಯದಲ್ಲಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿರುವುದು ಗ್ರಾಮಸ್ಥರ ತೀವ್ರ ಬೇಸರಕ್ಕೆ ಕಾರಣವಾಗಿದೆ. ತುರ್ತು ಚಿಕಿತ್ಸೆ ಬೇಕಾದಾಗ ಇರುವ ಸಿಬ್ಬಂದಿ ಕೇವಲ ತಾತ್ಕಾಲಿಕ ಚಿಕಿತ್ಸೆ ನೀಡಿ, ತಾಲೂಕು ಆಸ್ಪತ್ರೆಗೆ ತೆರಳುವಂತೆ ಸೂಚಿಸಿ ಕಳುಹಿಸುತ್ತಿದ್ದಾರೆ.
ವೈದ್ಯರಿಲ್ಲದೆ ಪವರ್‌ಮ್ಯಾನ್‌ಗೆ ಸಿಗದ ಚಿಕಿತ್ಸೆ!
ಇದೇ ವೇಳೆ ಆಸ್ಪತ್ರೆಯ ದುರವಸ್ಥೆಗೆ ಕನ್ನಡಿ ಹಿಡಿಯುವಂತಹ ಘಟನೆಯೊಂದು ನಡೆದಿದೆ. ಹೆಸ್ಕಾಂ (HESCOM) ಪವರ್‌ಮ್ಯಾನ್ (ಲೈನ್‌ಮ್ಯಾನ್) ಒಬ್ಬರು ಕರ್ತವ್ಯದಲ್ಲಿದ್ದಾಗ ಕರೆಂಟ್ ಶಾಕ್ ತಗುಲಿ ಅನಾಹುತ ಸಂಭವಿಸಿದೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಮೆಡ್ಲೇರಿ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಆದರೆ, ಅಲ್ಲಿ ಯಾವುದೇ ವೈದ್ಯರು ಇಲ್ಲದ ಕಾರಣ ಚಿಕಿತ್ಸೆ ದೊರೆಯದೆ ಪರದಾಡುವಂತಾಯಿತು.
ಅದೃಷ್ಟವಶಾತ್ ತಕ್ಷಣಕ್ಕೆ ಆಂಬ್ಯುಲೆನ್ಸ್ ವ್ಯವಸ್ಥೆ ದೊರೆತಿದ್ದರಿಂದಾಗಿ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಣೇಬೆನ್ನೂರಿನ ಆಸ್ಪತ್ರೆಗೆ ರವಾನಿಸಲಾಯಿತು. ಒಂದು ವೇಳೆ ಆಂಬ್ಯುಲೆನ್ಸ್ ಸಿಗುವುದು ತಡವಾಗಿದ್ದರೆ ಜೀವಕ್ಕೇ ಅಪಾಯವಿತ್ತು ಎಂದು ಆಕ್ರೋಶಗೊಂಡಿರುವ ರೋಗಿಗಳು ಹಾಗೂ ಗ್ರಾಮಸ್ಥರು, ಆಸ್ಪತ್ರೆಯ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಗ್ರಾಮ ಹಿತರಕ್ಷಣ ಯುವ ಸಂಘದ ಆಗ್ರಹ: “ಶಾಸಕರು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ, 25 ಸಾವಿರ ಜನಸಂಖ್ಯೆ ಇರುವ ದೊಡ್ಡ ಗ್ರಾಮದ ಮೆಡ್ಲೇರಿಯಲ್ಲಿ ಕಾಯಂ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಶಾಸಕರು ತಕ್ಷಣ ಇತ್ತ ಗಮನಹರಿಸಬೇಕು. ಆದಷ್ಟು ಬೇಗ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸಿ, ದಿನದ 24 ಗಂಟೆಯೂ ನಿರಂತರ ವೈದ್ಯಕೀಯ ಸೇವೆ ಸಿಗುವಂತೆ ಮಾಡಬೇಕು,” ಎಂದು ‘ಗ್ರಾಮ ಹಿತರಕ್ಷಣ ಯುವ ಸಂಘ’ದ ಸದಸ್ಯರಾದ ನಾಗಚಂದ್ರ ಗೊರಮಾಳರ ಹಾಗೂ ಮಂಜುನಾಥ ಬ. ಅಂಬಿಗೇರ ಒತ್ತಾಯಿಸಿದ್ದಾರೆ.
ವರದಿ: ಮಾರುತಿ ತಳವಾರ, ನೀಡ್ಸ್ ಆಫ್ ಪಬ್ಲಿಕ್
ಇದೇ ರೀತಿಯ ನಿಖರ ಸುದ್ದಿಗಳಿಗೆ ನಮ್ಮ ನೀಡ್ಸ್ ಪಬ್ಲಿಕ್ ಆಪ್ ಡೌನ್ಲೋಡ್ App ಮಾಡಿ
ಈ ಮಾಹಿತಿಗಳನ್ನು ಓದಿ:

ಮಾರುತಿ ತಳವಾರ್ ಅವರು ‘Needs of Public’ ಜಾಲತಾಣದ ಹಾವೇರಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಬಿಎ, ಬಿ.ಎಡ್ ಹಾಗೂ ಪತ್ರಿಕೋದ್ಯಮದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ಮೊದಲು ಸುಮಾರು ಐದು ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಸಮಾಜಮುಖಿ ವಿಚಾರಗಳು ಮತ್ತು ಜನಪರ ಸಮಸ್ಯೆಗಳ ಕುರಿತು ವಿಶೇಷ ಆಸಕ್ತಿ ಹೊಂದಿದ್ದಾರೆ.
ಸ್ಥಳೀಯ ಆಡಳಿತ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕೃಷಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಆಧರಿಸಿದ ವರದಿಗಳನ್ನು ಸಿದ್ಧಪಡಿಸುವಲ್ಲಿ ಅನುಭವ ಹೊಂದಿರುವ ಇವರು, ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಓದುಗರಿಗೆ ತಲುಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಹಾವೇರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಮುಖ ಬೆಳವಣಿಗೆಗಳು, ಜನಸಮಸ್ಯೆಗಳು ಹಾಗೂ ನೆಲಮಟ್ಟದ ಸುದ್ದಿಗಳನ್ನು ವರದಿ ಮಾಡುವಲ್ಲಿ ವಿಶೇಷ ಒಲವು ಹೊಂದಿದ್ದಾರೆ.


WhatsApp Group




Leave a Reply