PMFBY 2026 info scaled

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2026: ಅರ್ಜಿ ಆರಂಭ, ಬೆಳೆಗಳ ಪಟ್ಟಿ ಹಾಗೂ ಅರ್ಜಿ ವಿಧಾನ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2026ಕ್ಕೆ ಅರ್ಜಿ ಆರಂಭವಾಗಿದೆ. ಯಾವ ಬೆಳೆಗಳಿಗೆ ವಿಮೆ ಸಿಗಲಿದೆ? ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು, ಕೊನೆಯ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು

  • ಬರ, ಪ್ರವಾಹ, ಕೀಟಬಾಧೆಯಿಂದ ಬೆಳೆ ನಷ್ಟವಾದರೆ ರೈತರಿಗೆ ಸಿಗಲಿದೆ ಆರ್ಥಿಕ ರಕ್ಷಣೆ.
  • ಸಾಲ ಪಡೆದ ಮತ್ತು ಪಡೆಯದ ರೈತರಿಗೂ ಇದರಲ್ಲಿ ಸ್ವಯಂಪ್ರೇರಿತವಾಗಿ ಅರ್ಜಿ ಸಲ್ಲಿಸಲು ಅವಕಾಶ.
  • ಮಧ್ಯವರ್ತಿಗಳ ಹಾವಳಿಯಿಲ್ಲ; ಡ್ರೋನ್ ಮೂಲಕ ಸಮೀಕ್ಷೆ ನಡೆಸಿ ನೇರವಾಗಿ ರೈತರ ಖಾತೆಗೆ ಹಣ.

ಮಳೆ ಕೊರತೆ, ಅಕಾಲಿಕ ಮಳೆ, ಪ್ರವಾಹ ಅಥವಾ ಬರದಿಂದ ಬೆಳೆ ನಷ್ಟವಾಗುವುದು ರೈತರಿಗೆ ದೊಡ್ಡ ಸಂಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ರೈತರ ಆರ್ಥಿಕ ಭದ್ರತೆಗೆ ನೆರವಾಗಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2026 ಮತ್ತೆ ಆರಂಭವಾಗಿದೆ.

ಈ ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬಹುದಾಗಿದ್ದು, ಪ್ರಕೃತಿ ವಿಕೋಪದಿಂದ ನಷ್ಟವಾದರೆ ಪರಿಹಾರ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಯಾವ ಬೆಳೆಗಳಿಗೆ ವಿಮೆ ಸಿಗಲಿದೆ? ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಯಾವುವು? ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ 2026

ವಿಷಯಸಂಪೂರ್ಣ ವಿವರ
ಯೋಜನೆಯ ಹೆಸರುಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ
ಯಾರಿಗೆ ಲಾಭ?ಕೃಷಿ ಸಾಲ ಪಡೆದ ಹಾಗೂ ಸಾಲ ಪಡೆಯದ ಎಲ್ಲಾ ರೈತರಿಗೆ
ಅರ್ಹ ಬೆಳೆಗಳುಭತ್ತ, ರಾಗಿ, ಎಣ್ಣೆ ಬೀಜಗಳು, ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳು
ಅಗತ್ಯ ದಾಖಲೆಗಳುಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಜಮೀನಿನ ಪಹಣಿ (RTC)
ಪರಿಹಾರದ ವಿಧಾನಡ್ರೋನ್/ಉಪಗ್ರಹ ಸಮೀಕ್ಷೆಯ ಬಳಿಕ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ

Courtesy: ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ (YouTube)

ಯಾವೆಲ್ಲ ನಷ್ಟಗಳಿಗೆ ಈ ವಿಮೆ ಅನ್ವಯಿಸುತ್ತದೆ?

ಕೇವಲ ಮಳೆ ಬಾರದೆ ಹೋದರೆ ಮಾತ್ರವಲ್ಲ, ಅತಿವೃಷ್ಟಿ (ಪ್ರವಾಹ), ಬಿರುಗಾಳಿ ಮಳೆ, ಅಕಾಲಿಕ ಮಳೆ, ಹಾಗೂ ಕೀಟಬಾಧೆ ಮತ್ತು ರೋಗಗಳಿಂದ ಉಂಟಾಗುವ ಬೆಳೆ ನಷ್ಟಕ್ಕೂ ಈ ವಿಮೆಯು ಆರ್ಥಿಕ ರಕ್ಷಣೆ ಒದಗಿಸುತ್ತದೆ. ರೈತರ ಆದಾಯವನ್ನು ಸ್ಥಿರಗೊಳಿಸುವುದು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಮೂಲ ಉದ್ದೇಶದಿಂದ ಫೆಬ್ರವರಿ 18, 2016 ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಇಂದು ಇದು ಕರ್ನಾಟಕದ ಮೂಲೆ ಮೂಲೆಗೂ ತಲುಪಿ ರೈತರ ಬಾಳಿನಲ್ಲಿ ಬೆಳಕು ಮೂಡಿಸುತ್ತಿದೆ.

ಬೆಳೆ ನಷ್ಟದ ಸಮೀಕ್ಷೆ ಹೇಗೆ ನಡೆಯುತ್ತೆ? ಅಧಿಕಾರಿಗಳು ಬರ್ತಾರಾ?

ಹಿಂದೆಲ್ಲಾ ಬೆಳೆ ನಷ್ಟವಾದರೆ ಅಧಿಕಾರಿಗಳು ಬಂದು ನೋಡುವವರೆಗೆ ಕಾಯಬೇಕಿತ್ತು. ಆದರೆ ಈಗ ತಂತ್ರಜ್ಞಾನ ಬದಲಾಗಿದೆ. ಕರ್ನಾಟಕ ಸರ್ಕಾರವು ಉಪಗ್ರಹ (Satellite) ಚಿತ್ರಣ, ಡ್ರೋನ್‌ಗಳು ಮತ್ತು ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಬೆಳೆ ನಷ್ಟದ ನಿಖರ ಮೌಲ್ಯಮಾಪನ ಮಾಡುತ್ತದೆ. ಇದರಿಂದ ಯಾರಿಗೂ ಮೋಸವಾಗುವುದಿಲ್ಲ ಹಾಗೂ ರೈತರಿಗೆ ಅತ್ಯಂತ ತ್ವರಿತವಾಗಿ, ಪಾರದರ್ಶಕವಾಗಿ ಪರಿಹಾರ ಸಿಗುತ್ತದೆ.

ವಿಮೆ ಮಾಡಿಸಿದರೆ ನಿಜಕ್ಕೂ ಪರಿಹಾರದ ಹಣ ಬರುತ್ತಾ?

ಖಂಡಿತ ಬರುತ್ತದೆ! ಇದಕ್ಕೆ ನಮ್ಮ ಕಣ್ಣ ಮುಂದಿರುವ ಉದಾಹರಣೆಯೇ ಸಾಕ್ಷಿ. 2024-25 ನೇ ಸಾಲಿನಲ್ಲಿ ಕೇವಲ ಒಂದು ಜಿಲ್ಲೆಯ ಲೆಕ್ಕ ತೆಗೆದುಕೊಂಡರೆ, ಒಟ್ಟು 1,57,169 ರೈತರು ನೋಂದಣಿಯಾಗಿದ್ದು, 7 ಕೋಟಿ 3 ಲಕ್ಷದ 5 ಸಾವಿರ ರೂ. ಪ್ರೀಮಿಯಂ ಪಾವತಿಸಿದ್ದರು. ಇದರಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ 6,417 ಜನ ರೈತರಿಗೆ ಬರೋಬ್ಬರಿ 1 ಕೋಟಿ 52 ಲಕ್ಷದ 60 ಸಾವಿರ ರೂ. ಗಳ ಪರಿಹಾರದ ಮೊತ್ತ (ಕ್ಲೇಮ್‌) ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಇದು ಕಟ್ಟ ಕಡೆಯ ರೈತನಿಗೂ ವಿಮಾ ಹಣ ತಲುಪುತ್ತಿರುವುದಕ್ಕೆ ಸ್ಪಷ್ಟ ನಿದರ್ಶನ.

ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಬಹುದು?

ಎಲ್ಲ ಬೆಳೆಗಳಿಗೂ ಒಂದೇ ನಿಯಮವಿರುವುದಿಲ್ಲ. ಮುಂಗಾರು (ಖಾರೀಫ್) ಹಾಗೂ ಹಿಂಗಾರು ಹಂಗಾಮಿನ ಪ್ರಮುಖ ಆಹಾರ ಬೆಳೆಗಳಾದ ಭತ್ತ, ರಾಗಿ, ಮತ್ತು ಎಣ್ಣೆ ಬೀಜಗಳು. ಜೊತೆಗೆ ಪ್ರಮುಖ ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ನೀವು ಬೆಳೆದ ಬೆಳೆ ಈ ಪಟ್ಟಿಯಲ್ಲಿದೆಯೇ ಎಂಬುದನ್ನು ಹತ್ತಿರದ ಕೃಷಿ ಇಲಾಖೆಯಲ್ಲಿ ಮೊದಲು ಖಚಿತಪಡಿಸಿಕೊಳ್ಳಿ. (ಖಾರೀಫ್‌ 2020 ರಿಂದ ಈ ಯೋಜನೆಯು ಸಾಲ ಪಡೆದ ಮತ್ತು ಸಾಲ ರಹಿತ ರೈತರಿಗೆ ಸ್ವಯಂಪ್ರೇರಿತವಾಗಿದೆ).

pmfby 2026

ಬೆಳೆ ವಿಮೆಗೆ ಅರ್ಜಿ ಸಲ್ಲಿಸುವ ಸುಲಭ ವಿಧಾನಗಳು (How-To Apply):

ರೈತರು ವಿಮೆ ಮಾಡಿಸಲು ಕಚೇರಿಯಿಂದ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಈ ಕೆಳಗಿನ ಯಾವುದಾದರೂ ಒಂದು ವಿಧಾನದ ಮೂಲಕ ನೀವು ಸುಲಭವಾಗಿ ವಿಮೆ ಮಾಡಿಸಬಹುದು:

  1. ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರ (CSC): ನಿಮ್ಮ ಹತ್ತಿರದ ‘ಗ್ರಾಮ ಒನ್’, ‘ಕರ್ನಾಟಕ ಒನ್’ ಅಥವಾ ‘ರೈತ ಸಂಪರ್ಕ ಕೇಂದ್ರ’ಕ್ಕೆ ಭೇಟಿ ನೀಡಿ. ನಿಮ್ಮ ಜಮೀನಿನ ಪಹಣಿ (RTC), ಬ್ಯಾಂಕ್ ಪಾಸ್‌ಬುಕ್ ಮತ್ತು ಆಧಾರ್ ಕಾರ್ಡ್ ನೀಡಿ ಅರ್ಜಿ ತುಂಬಬಹುದು. ಅಲ್ಲಿಯೇ ನಿಗದಿತ ಪ್ರೀಮಿಯಂ ಪಾವತಿಸಿ ರಸೀದಿ ಪಡೆಯಬಹುದು.
  2. ಬ್ಯಾಂಕ್ ಮೂಲಕ ವಿಮೆ: ನೀವು ಯಾವ ಬ್ಯಾಂಕಿನಲ್ಲಿ ಅಥವಾ ಸೊಸೈಟಿಯಲ್ಲಿ ಕೃಷಿ ಸಾಲ (Crop Loan) ಪಡೆದಿದ್ದೀರೋ, ಅದೇ ಬ್ಯಾಂಕ್ ಶಾಖೆಗೆ ಹೋಗಿ, ಸಾಲದ ಖಾತೆಯ ಮೂಲಕವೇ ಪ್ರೀಮಿಯಂ ಕಂತು ಪಾವತಿಸಿ ವಿಮೆ ಮಾಡಿಸಿಕೊಳ್ಳಬಹುದು.
  3. ಸ್ವತಃ ಆನ್‌ಲೈನ್‌ ಮೂಲಕ (Online): ನಿಮಗೆ ಮೊಬೈಲ್ ಅಥವಾ ಕಂಪ್ಯೂಟರ್ ಜ್ಞಾನವಿದ್ದರೆ, ಬೇರೆಲ್ಲೂ ಹೋಗಬೇಕಿಲ್ಲ. ಸರ್ಕಾರದ ಅಧಿಕೃತ ಬೆಳೆ ವಿಮೆ ಪೋರ್ಟಲ್ ಮೂಲಕ ನೀವೇ ಸ್ವತಃ ಅರ್ಜಿ ಸಲ್ಲಿಸಿ, ಆನ್‌ಲೈನ್‌ನಲ್ಲೇ ಹಣ ಪಾವತಿಸಬಹುದು.

ನೆನಪಿರಲಿ: ನೀವು ಕೃಷಿ ಇಲಾಖೆ, ಬ್ಯಾಂಕ್ ಅಥವಾ ಗ್ರಾಮ ಒನ್.. ಎಲ್ಲಿಯೇ ಅರ್ಜಿ ಸಲ್ಲಿಸಿದರೂ, ನಿಗದಿತ ಪ್ರೀಮಿಯಂ ಪಾವತಿಸಿದ ಬಳಿಕ ಅಲ್ಲಿಯೇ ಮುದ್ರಿತ ರಸೀದಿಯನ್ನು (Printed Receipt) ಕಡ್ಡಾಯವಾಗಿ ಪಡೆದುಕೊಳ್ಳಿ. ಇದು ಭವಿಷ್ಯದಲ್ಲಿ ಪರಿಹಾರ ಪಡೆಯಲು ಅತ್ಯಂತ ಪ್ರಮುಖ ದಾಖಲೆಯಾಗಿದೆ.

💡 ನೀಡ್ಸ್ ಆಫ್ ಪಬ್ಲಿಕ್ ಸಲಹೆ: ರೈತ ಬಾಂಧವರೇ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದವರೆಗೆ ದಯವಿಟ್ಟು ಕಾಯಬೇಡಿ! ಕಡೇ ದಿನಗಳಲ್ಲಿ ಸರ್ವರ್ ಡೌನ್ ಆಗುವ ಸಮಸ್ಯೆ ಸರ್ವೇ ಸಾಮಾನ್ಯ. ಬಿತ್ತನೆ ಮಾಡಿದ ಕೂಡಲೇ ನಿಮ್ಮ ಹತ್ತಿರದ ಕೇಂದ್ರಕ್ಕೆ ಹೋಗಿ ವಿಮೆ ಮಾಡಿಸಿ. ಇನ್ನೊಂದು ಅತಿ ಮುಖ್ಯವಾದ ವಿಚಾರವೆಂದರೆ, ನಿಮ್ಮ ಬ್ಯಾಂಕ್ ಖಾತೆಗೆ ‘ಆಧಾರ್ ಲಿಂಕ್’ (NPCI ಮ್ಯಾಪಿಂಗ್) ಆಗಿದೆಯೇ ಎಂದು ಒಮ್ಮೆ ಬ್ಯಾಂಕ್‌ಗೆ ಹೋಗಿ ಚೆಕ್ ಮಾಡಿಕೊಳ್ಳಿ. ಆಧಾರ್ ಲಿಂಕ್ ಆಗಿಲ್ಲದಿದ್ದರೆ ಪರಿಹಾರದ ಹಣ ನಿಮ್ಮ ಅಕೌಂಟ್‌ಗೆ ಬರುವುದಿಲ್ಲ! ಹಾಗೆಯೇ, ವಾಟ್ಸಾಪ್‌ನಲ್ಲಿ ಬರುವ “ಪರಿಹಾರ ಪಡೆಯಲು ಲಿಂಕ್ ಕ್ಲಿಕ್ ಮಾಡಿ” ಎಂಬ ನಕಲಿ ಮೆಸೇಜ್‌ಗಳನ್ನು ನಂಬಬೇಡಿ.

❓ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ನಾನು ಬ್ಯಾಂಕ್‌ನಲ್ಲಿ ಕೃಷಿ ಸಾಲ ಪಡೆದಿಲ್ಲ, ಆದರೂ ಬೆಳೆ ವಿಮೆ ಮಾಡಿಸಬಹುದೇ?
ಉತ್ತರ: ಖಂಡಿತ ಮಾಡಿಸಬಹುದು! 2020 ರ ಮುಂಗಾರು ಹಂಗಾಮಿನಿಂದ ಈ ಯೋಜನೆಯನ್ನು ಸ್ವಯಂಪ್ರೇರಿತ (Voluntary) ಮಾಡಲಾಗಿದೆ. ಸಾಲ ಪಡೆಯದ ರೈತರೂ ಸಹ ತಮ್ಮ ಪಹಣಿ, ಆಧಾರ್ ಮತ್ತು ಬ್ಯಾಂಕ್ ದಾಖಲೆಗಳನ್ನು ನೀಡಿ ಸುಲಭವಾಗಿ ವಿಮೆ ಮಾಡಿಸಿಕೊಳ್ಳಬಹುದು.
ಬೆಳೆ ನಷ್ಟವಾದರೆ ಪರಿಹಾರದ ಹಣ ನಮ್ಮ ಕೈ ಸೇರುವುದು ಹೇಗೆ?
ಉತ್ತರ: ಬೆಳೆ ಹಾನಿಯಾದಾಗ ರಾಜ್ಯ ಸರ್ಕಾರವು ಡ್ರೋನ್ ಹಾಗೂ ಉಪಗ್ರಹಗಳ (Satellite) ಮೂಲಕ ನಿಖರವಾದ ಸಮೀಕ್ಷೆ ನಡೆಸುತ್ತದೆ. ನಷ್ಟ ದೃಢಪಟ್ಟ ಬಳಿಕ, ವಿಮಾ ಕಂಪನಿಗಳು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, ಆ ಹಣವನ್ನು ನೇರವಾಗಿ ರೈತರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ (DBT ಮೂಲಕ) ಜಮೆ ಮಾಡುತ್ತವೆ.
ಪ್ರೀಮಿಯಂ (ವಿಮಾ ಕಂತು) ಮೊತ್ತವನ್ನು ಯಾರು ನಿರ್ಧರಿಸುತ್ತಾರೆ?
ಉತ್ತರ: ನೀವು ಬೆಳೆಯುವ ಬೆಳೆ ಮತ್ತು ನಿಮ್ಮ ಪ್ರದೇಶವನ್ನು ಆಧರಿಸಿ ಪ್ರೀಮಿಯಂ ಮೊತ್ತವನ್ನು ಸರ್ಕಾರವೇ ಮೊದಲೇ ನಿಗದಿಪಡಿಸಿರುತ್ತದೆ. ರೈತರು ಅತ್ಯಂತ ಕಡಿಮೆ ಮೊತ್ತವನ್ನು ಪಾವತಿಸಿದರೆ ಸಾಕು, ಉಳಿದ ಪ್ರೀಮಿಯಂ ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ.

ವರದಿ: ಶಿವರಾಜ- ನೀಡ್ಸ್ ಆಫ್ ಪಬ್ಲಿಕ್, ದಾವಣಗೆರೆ


WhatsApp Group Join Now
Telegram Group Join Now

Popular Categories