bellary dcc bank recruitment 2026 scaled

ಬಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿ 2026: 82 ಹುದ್ದೆಗಳಿಗೆ ಅರ್ಜಿ ಆಹ್ವಾನ; SSLC, PUC ಅಭ್ಯರ್ಥಿಗಳಿಗೆ ₹83,000 ವರೆಗೆ ವೇತನ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಹೊಸಪೇಟೆ (Bellary DCCB) ಯಲ್ಲಿ 82 ಎಫ್‌ಡಿಎ, ಎಸ್‌ಡಿಎ, ವಾಹನ ಚಾಲಕ ಮತ್ತು ಕಿರಿಯ ಸೇವಕ ಹುದ್ದೆಗಳಿಗೆ ಪರಿಷ್ಕೃತ ಅಧಿಸೂಚನೆ ಪ್ರಕಟ. ವಿದ್ಯಾರ್ಹತೆ, ವಯೋಮಿತಿ, ಪರೀಕ್ಷಾ ಮಾದರಿ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಳ್ಳಾರಿ, ವಿಜಯನಗರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬ್ಯಾಂಕ್ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನತೆಗೆ ಇಲ್ಲಿದೆ ಒಂದು ಭರ್ಜರಿ ಸಿಹಿಸುದ್ದಿ. ಹೊಸಪೇಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ‘ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.’ (Bellary DCCB) ತನ್ನ ಶಾಖೆಗಳಲ್ಲಿ ಖಾಲಿ ಇರುವ ವಿವಿಧ 82 ಹುದ್ದೆಗಳನ್ನು ತುಂಬಲು ಅಧಿಕೃತವಾಗಿ ಪರಿಷ್ಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ, ಇದೇ ಹುದ್ದೆಗಳಿಗೆ ಏಪ್ರಿಲ್ 06, 2026 ರಂದು ಅಧಿಸೂಚನೆ ಹೊರಡಿಸಲಾಗಿತ್ತು, ಆದರೆ ಒಳ ಮೀಸಲಾತಿ ಕಾರಣಗಳಿಂದ ಮೇ 07 ರಂದು ಅದನ್ನು ಹಿಂಪಡೆಯಲಾಗಿತ್ತು. ಇದೀಗ ಹೊಸ ರೋಸ್ಟರ್ ಬಿಂದು ಹಾಗೂ ಒಳ ಮೀಸಲಾತಿಯನ್ನು ಅಳವಡಿಸಿಕೊಂಡು ಜೂನ್ 01, 2026 ರಂದು ಹೊಸದಾಗಿ ಪರಿಷ್ಕೃತ ಪ್ರಕಟಣೆ ಹೊರಡಿಸಲಾಗಿದೆ.

ಈ ಬೃಹತ್ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯವಸ್ಥಾಪಕರು (FDA), ದ್ವಿತೀಯ ದರ್ಜೆ ಸಹಾಯಕರು (SDA), ವಾಹನ ಚಾಲಕ ಮತ್ತು ಕಿರಿಯ ಸೇವಕ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇವಲ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಪಾಸ್ ಆದವರಿಗೂ ಇಲ್ಲಿ ಅತ್ಯುತ್ತಮ ಸರ್ಕಾರಿ ದರ್ಜೆಯ ಬ್ಯಾಂಕ್ ಉದ್ಯೋಗ ಪಡೆಯುವ ಅವಕಾಶವಿದೆ. ಹಾಗಾದರೆ, ಈ ಹುದ್ದೆಗಳಿಗೆ ಬೇಕಾದ ಶೈಕ್ಷಣಿಕ ಅರ್ಹತೆ ಏನು? ವಯೋಮಿತಿ ಸಡಿಲಿಕೆ ಇದೆಯಾ? ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಮತ್ತು ಆನ್‌ಲೈನ್‌ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ.

ಹುದ್ದೆಗಳ ವರ್ಗೀಕರಣ ಮತ್ತು ಖಾಲಿ ಹುದ್ದೆಗಳ ವಿವರ (Vacancy Details)

ಬಳ್ಳಾರಿ ಡಿಸಿಸಿ ಬ್ಯಾಂಕ್‌ನಲ್ಲಿ ಪ್ರಸ್ತುತ ಒಟ್ಟು 82 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಕಲ್ಯಾಣ ಕರ್ನಾಟಕ (371 ಜೆ) ಮತ್ತು ಕಲ್ಯಾಣ ಕರ್ನಾಟಕೇತರ (ರಾಜ್ಯಮಟ್ಟದ ಉಳಿಕೆ ವೃಂದ) ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಹುದ್ದೆಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ:

  • ವ್ಯವಸ್ಥಾಪಕರು / ಪ್ರಥಮ ದರ್ಜೆ ಸಹಾಯಕರು (Manager / FDA): ಒಟ್ಟು 22 ಹುದ್ದೆಗಳು.
  • ದ್ವಿತೀಯ ದರ್ಜೆ ಸಹಾಯಕರು (Second Division Assistant – SDA): ಒಟ್ಟು 28 ಹುದ್ದೆಗಳು.
  • ವಾಹನ ಚಾಲಕರು (Vehicle Driver): 01 ಹುದ್ದೆ.
  • ಕಿರಿಯ ಸೇವಕರು (Junior Assistant / Kiriya Sevakaru): ಒಟ್ಟು 31 ಹುದ್ದೆಗಳು.

ಶೈಕ್ಷಣಿಕ ಅರ್ಹತೆಗಳು (Educational Qualifications)

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ (ಅಂದರೆ ಜೂನ್ 30, 2026) ಅಭ್ಯರ್ಥಿಗಳು ತಮ್ಮ ಹುದ್ದೆಗೆ ಅನುಗುಣವಾಗಿ ಈ ಕೆಳಗಿನ ಶೈಕ್ಷಣಿಕ ಅರ್ಹತೆಗಳನ್ನು ಕಡ್ಡಾಯವಾಗಿ ಪಡೆದಿರಬೇಕು:

  1. ವ್ಯವಸ್ಥಾಪಕರು / ಎಫ್‌ಡಿಎ (FDA): ಭಾರತದ ಕಾನೂನಿನನ್ವಯ ಸ್ಥಾಪನೆಯಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ (Degree) ತೇರ್ಗಡೆಯಾಗಿರಬೇಕು.
  2. ದ್ವಿತೀಯ ದರ್ಜೆ ಸಹಾಯಕರು (SDA): ಮಾನ್ಯತೆ ಪಡೆದ ಪದವಿ ಪೂರ್ವ ಮಂಡಳಿಯಿಂದ ದ್ವಿತೀಯ ಪಿಯುಸಿ (2nd PUC) ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು.
  3. ವಾಹನ ಚಾಲಕರು: ಎಸ್‌ಎಸ್‌ಎಲ್‌ಸಿ (SSLC / 10th) ಯಲ್ಲಿ ಉತ್ತೀರ್ಣರಾಗಿದ್ದು, ಜೊತೆಗೆ ಕಾನೂನುಬದ್ಧವಾದ ಚಾಲ್ತಿಯಲ್ಲಿರುವ ಡ್ರೈವಿಂಗ್ ಲೈಸೆನ್ಸ್ (Driving License) ಹೊಂದಿರಬೇಕು.
  4. ಕಿರಿಯ ಸೇವಕರು (Junior Assistant): ಕನಿಷ್ಠ ಎಸ್‌ಎಸ್‌ಎಲ್‌ಸಿ (SSLC / 10th) ಯಲ್ಲಿ ಉತ್ತೀರ್ಣರಾಗಿರಬೇಕು.

(ವಿಶೇಷ ಸೂಚನೆ: ಎಲ್ಲಾ ಹುದ್ದೆಗಳಿಗೂ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯನ್ನು ಓದುವ, ಬರೆಯುವ ಮತ್ತು ಸ್ವಚ್ಛವಾಗಿ ಮಾತನಾಡುವ ಜ್ಞಾನ ಕಡ್ಡಾಯವಾಗಿರಬೇಕು. ಎಫ್‌ಡಿಎ ಮತ್ತು ಎಸ್‌ಡಿಎ ಹುದ್ದೆಗಳಿಗೆ ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಇರುವುದು ಅತ್ಯಗತ್ಯ).

ಮಾಸಿಕ ವೇತನ ಶ್ರೇಣಿ (Salary Details)

ಆಯ್ಕೆಯಾದ ಅಭ್ಯರ್ಥಿಗಳಿಗೆ ಬಳ್ಳಾರಿ ಡಿಸಿಸಿ ಬ್ಯಾಂಕ್ ನಿಯಮಗಳ ಅನ್ವಯ ಅತ್ಯುತ್ತಮ ಮತ್ತು ಆಕರ್ಷಕ ವೇತನ ಶ್ರೇಣಿಯನ್ನು ನೀಡಲಾಗುತ್ತದೆ:

  • ವ್ಯವಸ್ಥಾಪಕರು / ಎಫ್‌ಡಿಎ: ಮಾಸಿಕ ರೂ. 44,425 ರಿಂದ ರೂ. 83,700 ರವರೆಗೆ ವೇತನ ಶ್ರೇಣಿ.
  • ದ್ವಿತೀಯ ದರ್ಜೆ ಸಹಾಯಕರು (ಎಸ್‌ಡಿಎ): ಮಾಸಿಕ ರೂ. 34,100 ರಿಂದ ರೂ. 67,600 ರವರೆಗೆ ವೇತನ ಶ್ರೇಣಿ.
  • ವಾಹನ ಚಾಲಕರು: ಮಾಸಿಕ ರೂ. 31,775 ರಿಂದ ರೂ. 61,300 ರವರೆಗೆ ವೇತನ ಶ್ರೇಣಿ.
  • ಕಿರಿಯ ಸೇವಕರು: ಮಾಸಿಕ ರೂ. 29,600 ರಿಂದ ರೂ. 52,800 ರವರೆಗೆ ವೇತನ ಶ್ರೇಣಿ.

ವಯೋಮಿತಿ ಮತ್ತು ಭರ್ಜರಿ ಸಡಿಲಿಕೆ (Age Limit & Relaxations)

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿಯನ್ನು ಜೂನ್ 30, 2026 ಕ್ಕೆ ಅನ್ವಯವಾಗುವಂತೆ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಸಾಮಾನ್ಯ (General) ಅಭ್ಯರ್ಥಿಗಳಿಗೆ: ಗರಿಷ್ಠ 35 ವರ್ಷ.
  • ಪ್ರವರ್ಗ-2A, 2B, 3A, 3B ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷ.
  • SC / ST / ಪ್ರವರ್ಗ-1 ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷ.

5 ವರ್ಷಗಳ ಬಂಪರ್ ವಯೋಮಿತಿ ಸಡಿಲಿಕೆ: ಸರ್ಕಾರದ ಇತ್ತೀಚಿನ ಅಧಿಸೂಚನೆ (ಆದೇಶ ಸಂಖ್ಯೆ: ಸಿ.ಆ.ಸು.ಇ:2062:ಸೇನೆನಿ 2025) ಅನ್ವಯ, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (As a One Time Measure) ಬರೋಬ್ಬರಿ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಅಲ್ಲದೆ, ಮಾಜಿ ಸೈನಿಕರಿಗೆ ಅವರ ಸೇವಾ ಅವಧಿಯಷ್ಟು, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ಹಾಗೂ ವಿಧವಾ ಮಹಿಳೆಯರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಲಭ್ಯವಿದೆ.

ಅರ್ಜಿ ಶುಲ್ಕದ ವಿವರ (Application Fee)

ಅಭ್ಯರ್ಥಿಗಳು ತಮ್ಮ ಪ್ರವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ (Net Banking, Credit Card, Debit Card, UPI or Google Pay) ಕಡ್ಡಾಯವಾಗಿ ಪಾವತಿಸಬೇಕು. ಡಿ.ಡಿ, ಪೋಸ್ಟಲ್ ಆರ್ಡರ್ ಅಥವಾ ಮನಿ ಆರ್ಡರ್ ಮೂಲಕ ಪಾವತಿಸಲು ಅವಕಾಶವಿರುವುದಿಲ್ಲ.

  • ಸಾಮಾನ್ಯ (General) ಮತ್ತು 2A, 2B, 3A, 3B ಅಭ್ಯರ್ಥಿಗಳಿಗೆ: ರೂ. 1,000/- (ಪ್ಲಸ್ ಗೇಟ್ ವೇ ಶುಲ್ಕ).
  • ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1, ವಿಕಲಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ. 500/- (ಪ್ಲಸ್ ಗೇಟ್ ವೇ ಶುಲ್ಕ).

ಆಯ್ಕೆ ಪ್ರಕ್ರಿಯೆ

ಬಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿಯು ಲಿಖಿತ ಪರೀಕ್ಷೆ (Written Test) ಮತ್ತು ಮೌಖಿಕ ಸಂದರ್ಶನ (Interview) ಎಂಬ ಎರಡು ಹಂತಗಳಲ್ಲಿ ನಡೆಯಲಿದೆ.

ಸರ್ಕಾರ ಸೂಚಿಸಿರುವ ಬಾಹ್ಯ ಮೂಲ ಸಂಸ್ಥೆಯಿಂದ ಲಿಖಿತ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನಕ್ಕೆ 15 ಅಂಕಗಳನ್ನು ನಿಗದಿಪಡಿಸಲಾಗಿದೆ. ಅಂತಿಮವಾಗಿ ಲಿಖಿತ ಪರೀಕ್ಷೆಯ ಶೇಕಡ 85 ರಷ್ಟು ಅಂಕಗಳು ಮತ್ತು ಸಂದರ್ಶನದ ಅಂಕಗಳನ್ನು ಸೇರಿಸಿ ಮೆರಿಟ್ ಲಿಸ್ಟ್ (Merit List) ತಯಾರಿಸಿ ಆಯ್ಕೆ ಮಾಡಲಾಗುತ್ತದೆ.

ಮತ್ತು ಲಿಖಿತ ಪರೀಕ್ಷಾ ಮಾದರಿ (Selection Process)

ಎಫ್‌ಡಿಎ (FDA) ಮತ್ತು ಎಸ್‌ಡಿಎ (SDA) ಹುದ್ದೆಗಳ ಪರೀಕ್ಷಾ ಮಾದರಿ (ಒಟ್ಟು 200 ಅಂಕಗಳು – 2 ಗಂಟೆ ಅವಧಿ):

  • ಕನ್ನಡ ಭಾಷೆ: 50 ಅಂಕಗಳು
  • ಸಾಮಾನ್ಯ ಇಂಗ್ಲೀಷ್: 25 ಅಂಕಗಳು
  • ಸಾಮಾನ್ಯ ಜ್ಞಾನ: 25 ಅಂಕಗಳು
  • ಸಹಕಾರ ವಿಷಯ: 50 ಅಂಕಗಳು
  • ಭಾರತದ ಸಂವಿಧಾನ: 25 ಅಂಕಗಳು
  • ಬ್ಯಾಂಕಿಂಗ್, ಸಮಾಜಯುಕ್ತವಾದ ಚಟುವಟಿಕೆ ಮತ್ತು ವಸ್ತು ನಿಷ್ಠೆ ವಿಷಯ: 25 ಅಂಕಗಳು

ವಾಹನ ಚಾಲಕ ಮತ್ತು ಕಿರಿಯ ಸೇವಕ ಹುದ್ದೆಗಳ ಪರೀಕ್ಷಾ ಮಾದರಿ (ಒಟ್ಟು 100 ಅಂಕಗಳು – 1 ಗಂಟೆ ಅವಧಿ):

  • ಕನ್ನಡ ಭಾಷೆ: 50 ಅಂಕಗಳು
  • ಸಾಮಾನ್ಯ ಜ್ಞಾನ: 50 ಅಂಕಗಳು

(ಸೂಚನೆ: ಪ್ರಶ್ನೆ ಪತ್ರಿಕೆಯು ವಸ್ತು ನಿಷ್ಠಾ ಬಹು ಆಯ್ಕೆ (Multiple Choice Questions) ಮಾದರಿಯಲ್ಲಿರುತ್ತದೆ.)

ಹಳೆಯ ಅರ್ಜಿದಾರರಿಗೆ ಅತ್ಯಂತ ಪ್ರಮುಖ ಸೂಚನೆ (Important for Existing Applicants)

ದಿನಾಂಕ 06 ಏಪ್ರಿಲ್ 2026 ರ ಹಳೆಯ ಅಧಿಸೂಚನೆಯಡಿ ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಮತ್ತೊಮ್ಮೆ ಮರು ಅರ್ಜಿ (Application Re-submit) ಸಲ್ಲಿಸಲೇಬೇಕು.

ಹೊಸದಾಗಿ ಅರ್ಜಿ ಸಲ್ಲಿಸುವಾಗ “ನೀವು ಈಗಾಗಲೇ ಅರ್ಜಿ ಸಲ್ಲಿಸಿರುವಿರೇ?” ಎಂಬ ಆಯ್ಕೆಯಲ್ಲಿ ‘ಹೌದು’ ಎಂದು ಕ್ಲಿಕ್ ಮಾಡಿ, ನಿಮ್ಮ ಹಳೆಯ ನೊಂದಣಿ ಸಂಖ್ಯೆ (Registration Number) ನಮೂದಿಸಬೇಕು. ನೀವು ಮರು-ಅರ್ಜಿ ಸಲ್ಲಿಸಿದರೂ ಮತ್ತೊಮ್ಮೆ ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಆದರೆ, ನೀವು ಮರು ಅರ್ಜಿ (Re-submit) ಮಾಡದಿದ್ದರೆ, ನಿಮ್ಮ ಹಳೆಯ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಮತ್ತು ಹಣವನ್ನು ಹಿಂತಿರುಗಿಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಆನ್‌ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ (How to Apply Online)

ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಲು ಅವಕಾಶವಿಲ್ಲ.

Step 1: ಮೊದಲಿಗೆ ಬ್ಯಾಂಕಿನ ಅಧಿಕೃತ ಜಾಲತಾಣ www.bellarydcc.bank.in ಗೆ ಭೇಟಿ ನೀಡಿ. ಮುಖಪುಟದಲ್ಲಿ ಕಾಣುವ ‘BDCC RECRUITMENT 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.

bellary dcc bank apply now

Step 2: ಹೊಸಬರಾಗಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನೀಡಿ OTP ಮೂಲಕ ರಿಜಿಸ್ಟರ್ (Register) ಮಾಡಿಕೊಳ್ಳಿ.

Step 3: ನಂತರ ಲಾಗಿನ್ ಆಗಿ ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ ಮತ್ತು ಕೋರಬಯಸುವ ಮೀಸಲಾತಿಯ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.

Step 4: ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದ (White background) ಕೆಳಗೆ ಕಪ್ಪು ಮಾರ್ಕರ್ ಪೆನ್ನಿನಲ್ಲಿ ಸಹಿ ಮಾಡಿ, ಆ ಫೋಟೋವನ್ನು (100kb ಗಿಂತ ಕಡಿಮೆ) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

Step 5: ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜಾತಿ ಪ್ರಮಾಣಪತ್ರ ಮತ್ತು ಹುದ್ದೆಗೆ ಅಗತ್ಯವಿರುವ ಎಲ್ಲಾ ಅಂಕಪಟ್ಟಿಗಳನ್ನು ಸ್ವಯಂ ದೃಢೀಕರಿಸಿ (Self-attested) ಅಪ್‌ಲೋಡ್ ಮಾಡಿ.

Step 6: ಎಲ್ಲಾ ವಿವರಗಳನ್ನು ಸರಿಯಾಗಿದೆಯೇ ಎಂದು ಪರಿಶೀಲಿಸಿದ (Preview) ನಂತರ, ಕೊನೆಯದಾಗಿ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ ‘Submit’ ಮಾಡಿ.

Step 7: ಅರ್ಜಿ ಸಲ್ಲಿಕೆ ಪೂರ್ಣಗೊಂಡ ನಂತರ, ಭವಿಷ್ಯದ ಬಳಕೆಗಾಗಿ ಅರ್ಜಿಯ ಪ್ರಿಂಟ್ (Print) ತೆಗೆದುಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಿ.

    ಪ್ರಮುಖ ದಿನಾಂಕಗಳು (Important Dates)

    • ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಪ್ರಾರಂಭ ದಿನಾಂಕ: 01 ಜೂನ್ 2026
    • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜೂನ್ 2026 (ರಾತ್ರಿ 11.59 ರವರೆಗೆ)
    • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 30 ಜೂನ್ 2026


    ವರದಿ: ಕೃಷ್ಣಸಾಗರಿ – ನೀಡ್ಸ್ ಆಫ್ ಪಬ್ಲಿಕ್, ದಾವಣಗೆರೆ

    ಈ ಮಾಹಿತಿಗಳನ್ನು ಓದಿ:

    WhatsApp Group Join Now
    Telegram Group Join Now

    Popular Categories