ಶಿವಮೊಗ್ಗ : ಬಹಳ ಕಾಲದಿಂದ ಅರಣ್ಯ ಪ್ರದೇಶದಲ್ಲಿ ಬೇಸಾಯ ಮಾಡುತ್ತಾ ಬಂದಿರುವ ರೈತರಿಗೆ ತೊಂದರೆ ಕೊಟ್ಟು ಹೊರಹಾಕಬಾರದು ಎಂದು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಶನಿವಾರ ಜಿಲ್ಲಾ ಆಡಳಿತ ಕಚೇರಿಯಲ್ಲಿ ನಡೆದ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಕೆಆರ್‌ಐಡಿಎಲ್, ನೀರಾವರಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಅಧ್ಯಕ್ಷತೆ ವಹಿಸಿದ ಅವರು ಈ ಮಾತನಾಡಿದರು.
ಅನಾದಿ ಕಾಲದಿಂದ ಅರಣ್ಯ ಭೂಮಿಯಲ್ಲಿ ಬೇಸಾಯ ಮಾಡುತ್ತಿರುವ ರೈತರಿಗೆ ನೋಟೀಸ್ ನೀಡುವುದು, ತೊಂದರೆ ಕೊಟ್ಟು ವಲಸೆ ಹೊರಿಸುವ ಕಾರ್ಯ ಅರಣ್ಯ ಇಲಾಖೆ ಮಾಡಬಾರದು. ರೈತರ ಪರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳ ಪ್ರಕಾರ ನಡೆದುಕೊಳ್ಳಬೇಕೆಂದು ಸಂಬಂಧಿತ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಹೊಸದಾಗಿ ಅತಿಕ್ರಮಣಕ್ಕೆ ಅವಕಾಶ ಮಾಡಬಾರದು. 27-04-1978 ರ ಮೊದಲಿನ ಅರಣ್ಯ ಅತಿಕ್ರಮಣವನ್ನು ಕಾನೂನುಬದ್ಧಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಭೂ ಮಂಜೂರಾತಿ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಅನುಮೋದನೆ ಪಡೆದ ರೈತರ ಬೇಸಾಯ/ವಸತಿ ಭೂಮಿಯನ್ನು ಅರಣ್ಯ ಭೂಮಿ ಸೂಚಿಸುವ ಪ್ರಸ್ತಾವನೆಯಿಂದ ಹೊರತುಪಡಿಸಲು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಬೇಕೆಂದು ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮಾತನಾಡಿ, ಮಲೆನಾಡು ಪ್ರದೇಶದಲ್ಲಿ ರೈತರನ್ನು ಹೊರಹಾಕುವ ಸಂಬಂಧದ ನೋಟೀಸ್ ನೀಡಲಾಗುತ್ತಿದೆ. ಕೆಲವೆಡೆ ತೊಂದರೆ ನೀಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದರು.
ವನಪಾಲಕ ಹನುಮಂತಪ್ಪ ಅವರು ಮಾತನಾಡಿ, ಪಿಎಫ್ ಮತ್ತು ಎಂಎಫ್ ಪ್ರಕರಣಗಳು ಸಣ್ಣ ಅರಣ್ಯ ವ್ಯಾಪ್ತಿಗೆ ಬರುತ್ತವೆ. ಇವುಗಳನ್ನು ತೀರ್ಮಾನಿಸಬಹುದು, ಈ ಸಂಬಂಧ 375 ಅಧಿಸೂಚನೆಗಳಿವೆ ಎಂದು ತಿಳಿಸಿದರು.
ರಸ್ತೆ ಕಾಮಗಾರಿ ಪೂರ್ಣಗೊಳಿಸಿ : ಸಚಿವರು, ಜಿಲ್ಲೆಯ ಎಲ್ಲ ರಾಜ್ಯ ಹೆದ್ದಾರಿಗಳು, ಮುಖ್ಯ ರಸ್ತೆಗಳನ್ನು ನವೆಂಬರ್ ಅಂತ್ಯದೊಳಗೆ ಮತ್ತು ಇತರೆ ಎಲ್ಲ ರಸ್ತೆಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ನಿಂತ ತಕ್ಷಣ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು. ಗುಂಡಿಗಳನ್ನು ಮುಚ್ಚುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಗುಂಡಿಗಳಿಂದಾಗಿ ದ್ವಿಚಕ್ರ ವಾಹನಗಳ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಸಾವು-ಗಾವಲಿ ಸಂಭವಿಸುತ್ತಿದೆ. ಆದ್ದರಿಂದ ತ್ವರಿತವಾಗಿ ಗುಂಡಿಗಳನ್ನು ಮುಚ್ಚಬೇಕು ಮತ್ತು ರಸ್ತೆಯ ಅಂಚು ಹಾಗೂ ಮಧ್ಯಭಾಗವನ್ನು ಗುರುತು ಮಾಡಬೇಕೆಂದು ಸೂಚಿಸಿದ ಅವರು, ಜಿಲ್ಲಾ ಪೊಲೀಸ್ ಅಧಿಕೃತರು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು. ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದರು.
ನೀರಾವರಿ ಇಲಾಖೆ : ಸೊರಬ ತಾಲ್ಲೂಕಿನ ಗುಡುವಿ, ಯಡಗೊಪ್ಪ, ದಂಡಾವತಿ ಮತ್ತು ವರದಾ ನದಿಗಳಿಗೆ ಅಡ್ಡಲಾಗಿ ಸೇತುವೆ ರೂಪದ ಕಾಂಕ್ರೀಟ್ ಅಣೆಕಟ್ಟು ನಿರ್ಮಿಸುವ ರೂ. 160 ಕೋಟಿ ಮೌಲ್ಯದ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಬೇಕು. ಹಾಗೂ ಕಾಲುವೆಗಳ ಕಾಮಗಾರಿಯನ್ನು ಸಹ ಕೈಗೆತ್ತಿಕೊಳ್ಳಬೇಕು. ಅಧಿಕಾರಿಗಳ ನಡುವೆ ಸಮನ್ವಯ ಇದ್ದಲ್ಲಿ ಕಾಮಗಾರಿ ವೇಗವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲರೂ ಒಂದು ತಂಡದಂತೆ ಸಮನ್ವಯದಿಂದ ಕೆಲಸ ಮಾಡಬೇಕೆಂದರು.
ಸೊರಬ ತಾಲ್ಲೂಕಿನ ಮಾವಿನ ಹೊಳೆ, ಕೆರೆಹಳ್ಳಿ, ಜಂಗಿನಕೊಪ್ಪ ಗ್ರಾಮಗಳಲ್ಲಿ ವರದಾ ನದಿಗೆ ಅಡ್ಡಲಾಗಿ ಸೇತುವೆ ಮತ್ತು ಅಣೆಕಟ್ಟು ನಿರ್ಮಾಣ ಕಾಮಗಾರಿಗಳ ಕುರಿತು ವರದಿ ಪಡೆದುಕೊಂಡರು.
ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಘೋಷಿಸಲಾದ ಕೊಳಚೆ ಪ್ರದೇಶಗಳ ಕುರಿತು ಪ್ರಗತಿ ಪರಿಶೀಲಿಸಿದ ಸಚಿವರು, ಗ್ರಾಮೀಣ ಭಾಗದ ಕೊಳಚೆ ಪ್ರದೇಶಗಳಲ್ಲಿನ ಮನೆಗಳಿಗೆ ಹಕ್ಕುಪತ್ರ ನೀಡುವುದು ಹಾಗೂ ನಗರ ಪ್ರದೇಶದ ಕೊಳಚೆ ಪ್ರದೇಶಗಳಲ್ಲಿನ ಮನೆಗಳಿಗೆ 94 ಸಿ ಮತ್ತು ಸಿಸಿ ಪತ್ರ ನೀಡುವ ಕುರಿತು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ಶಾಸಕರು, ಸಾಗರದ ಕೊಳಚೆ ಪ್ರದೇಶದಲ್ಲಿನ ಮನೆ ನಿರ್ಮಾಣ ಕಾಮಗಾರಿ ನಿಂತು 12 ವರ್ಷ ಆಯಿತು. 150 ಮನೆಗಳ ಕೆಲಸ ಬಾಕಿ ಇದ್ದು, ಶೀಘ್ರದಲ್ಲಿ ಈ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದರು.
ನಗರ ಆಯುಕ್ತ ಮಾಯಣ್ಣಗೌಡ ಅವರು ಮಾತನಾಡಿ, ಶಿವಮೊಗ್ಗ ಮಹಾನಗರ ಪಾಲಿಕೆಯ ವಿವಿಧ ವಾರ್ಡ್ಗಳ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಯ ಒಡೆತನದ ನಿವೇಶನಗಳಲ್ಲಿ 40 ವರ್ಷಗಳಿಂದ ವಾಸವಾಗಿರುವ ಬಡ ಕುಟುಂಬಗಳ ಮನೆಗಳನ್ನು ಕಾನೂನುಬದ್ಧಗೊಳಿಸುವ ಸಂಬಂಧ 9000 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಚಿವರು, ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿಸಬೇಕು. ಯುದ್ಧದಂತೆ ಈ ಕಾರ್ಯವನ್ನು ಕೈಗೊಂಡು ನವೆಂಬರ್ ಅಂತ್ಯದೊಳಗೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಅಪಘಾತ, ಅನಾಹುತಗಳ ಸಂಖ್ಯೆ ಹೆಚ್ಚಲಿದೆ ಎಂದು ತಿಳಿಸಿದರು. ಸಚಿವರು ಜಿಲ್ಲೆಯಲ್ಲಿ 62 ಪ್ರವಾಸಿ ಸ್ಥಳಗಳಿದ್ದು ಈ ಕುರಿತು ಹೋರ್ಡಿಂಗ್, ಮಾಹಿತಿ ಫಲಕಗಳ ಮೂಲಕ ಪ್ರಚಾರ ಮಾಡಬೇಕು ಎಂದು ತಿಳಿಸಿದರು.

ಈ ಮಾಹಿತಿಗಳನ್ನು ಓದಿ
- ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಸರ್ಕಾರದಿಂದ ಬಿಗ್ ಅಪ್ಡೇಟ್
- ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಮನವಿ
- ನೌಕರರು ಮತ್ತು ಪಿಂಚಣಿದಾರರಿಗೆ 3% ತುಟ್ಟಿಭತ್ಯೆ (DA Hike) ಏರಿಕೆ, ದೀಪಾವಳಿಗೆ ಸಿಹಿ ಸುದ್ದಿ.!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




