haveri digital arrest crime scaled

ಹಾವೇರಿ: ‘ಉಗ್ರರ ನಂಟು’ ಆರೋಪಿಸಿ ಡಿಜಿಟಲ್ ಅರೆಸ್ಟ್; ಸಿಬಿಐ ಅಧಿಕಾರಿಗಳೆಂದು ನಂಬಿಸಿ ₹21.50 ಲಕ್ಷ ವಂಚನೆ

ಹಾವೇರಿಯಲ್ಲಿ ಆಘಾತಕಾರಿ ಸೈಬರ್ ಕ್ರೈಂ. ಸಿಬಿಐ ಮತ್ತು ಇಡಿ ಅಧಿಕಾರಿಗಳೆಂದು ನಂಬಿಸಿ, ವಾಟ್ಸಾಪ್ ವೀಡಿಯೊ ಕಾಲ್ ಮೂಲಕ ‘ಡಿಜಿಟಲ್ ಅರೆಸ್ಟ್’ ಮಾಡಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 21.50 ಲಕ್ಷ ರೂಪಾಯಿ ಎಗರಿಸಿದ ವಂಚಕರು.

ಹಾವೇರಿ: ನಿಮ್ಮ ಮೊಬೈಲ್‌ಗೆ ಬರುವ ಅಪರಿಚಿತ ಕರೆಗಳನ್ನು ರಿಸೀವ್ ಮಾಡುವ ಮುನ್ನ ನೀವೊಮ್ಮೆ ಗಂಭೀರವಾಗಿ ಯೋಚಿಸಲೇಬೇಕು. ಏಕೆಂದರೆ, ಸೈಬರ್ ವಂಚಕರು ಈಗ ಕೇವಲ ಓಟಿಪಿ (OTP) ಕೇಳಿ ಹಣ ಎಗರಿಸುವ ಹಳೆಯ ತಂತ್ರಗಳನ್ನು ಬಿಟ್ಟು, ನಿಮ್ಮನ್ನು ಮನೆಯಲ್ಲೇ ಕೂರಿಸಿ “ಡಿಜಿಟಲ್ ಅರೆಸ್ಟ್” (Digital Arrest) ಮಾಡುವ ಅತ್ಯಂತ ಅಪಾಯಕಾರಿ ತಂತ್ರಕ್ಕೆ ಕೈಹಾಕಿದ್ದಾರೆ. ಇದೇ ರೀತಿಯ ಬೆಚ್ಚಿಬೀಳಿಸುವ ಘಟನೆಯೊಂದು ಹಾವೇರಿಯಲ್ಲಿ ನಡೆದಿದ್ದು, ಅಮಾಯಕ ವ್ಯಕ್ತಿಯೊಬ್ಬರು ಬರೋಬ್ಬರಿ 21.50 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಹಾವೇರಿ ನಿವಾಸಿ ನಾಗಭೂಷಣ್ ಎಂಬುವವರೇ ಈ ಆನ್‌ಲೈನ್ ವಂಚಕರ ಬಲೆಗೆ ಬಿದ್ದ ದುರ್ದೈವಿ. ಸಿಬಿಐ (CBI) ಹಾಗೂ ಇಡಿ (ED) ಅಧಿಕಾರಿಗಳೆಂದು ನಂಬಿಸಿ, ನಿಮ್ಮ ಮೇಲೆ ಉಗ್ರಗಾಮಿಗಳ ನಂಟಿದೆ ಎಂದು ಬೆದರಿಸಿ ಈ ಬೃಹತ್ ಮೊತ್ತವನ್ನು ದೋಚಲಾಗಿದೆ. ಈ ಕುರಿತು ಮೇ 30 ರಂದು ಹಾವೇರಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.

ಶುರುವಾಗಿದ್ದೇ ಆ ವಾಟ್ಸಾಪ್ ಕರೆಯಿಂದ!

ಮೇ 12, 2026 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾಗಭೂಷಣ್ ಅವರ ಮೊಬೈಲ್‌ಗೆ ಒಂದು ಅಪರಿಚಿತ ವಾಟ್ಸಾಪ್ ಕರೆ ಬರುತ್ತದೆ. ತಾವು ‘ಸಿಬಿಐ ಮುಂಬೈ’ ಮತ್ತು ‘ಎಟಿಎಸ್ ಇನ್ವೆಸ್ಟಿಗೇಷನ್ ಏಜೆನ್ಸಿ’ (ED & ATS) ಅಧಿಕಾರಿಗಳಾದ ರಣಬೀರ್ ಸಿಂಗ್ ಮತ್ತು ಪ್ರದೀಪ್ ಕುಮಾರ್ ಎಂದು ಆ ಖದೀಮರು ಪರಿಚಯಿಸಿಕೊಳ್ಳುತ್ತಾರೆ. ವಾಟ್ಸಾಪ್ ವೀಡಿಯೊ ಕರೆಯಲ್ಲಿ ಅವರು ಅಚ್ಚುಕಟ್ಟಾಗಿ ಪೊಲೀಸ್ ಸಮವಸ್ತ್ರವನ್ನೂ ಧರಿಸಿದ್ದರು. ಇದನ್ನು ನೋಡಿದ ನಾಗಭೂಷಣ್ ಅಕ್ಷರಶಃ ಗಾಬರಿಯಾಗಿದ್ದಾರೆ.

‘ನಿಮ್ಮ ಆಧಾರ್ ಕಾರ್ಡ್ ಉಗ್ರರ ಬಳಿ ಇದೆ’ ಎಂದು ಬೆದರಿಕೆ!

ನಾಗಭೂಷಣ್ ಅವರನ್ನು ಮಾನಸಿಕವಾಗಿ ಕುಗ್ಗಿಸಲು ವಂಚಕರು ಹೆಣೆದ ಕಥೆ ನಿಜಕ್ಕೂ ಆತಂಕಕಾರಿ. “ಪೆಹಲ್ಗಾಮ್ ಉಗ್ರಗಾಮಿ ದಾಳಿಯಲ್ಲಿ ಭಾಗಿಯಾದ ‘ಆದಿಲ್ ಗೋರಿ’ ಎಂಬ ಉಗ್ರನನ್ನು ನಾವು ಬಂಧಿಸಿದ್ದೇವೆ. ಆತನ ವಿಚಾರಣೆ ವೇಳೆ ನಿಮ್ಮ ಹೆಸರು ಬಾಯ್ಬಿಟ್ಟಿದ್ದಾನೆ. ಆತನ ಬಳಿ ನಿಮ್ಮ ಆಧಾರ್ ಕಾರ್ಡ್ ಇದೆ. ನಿಮ್ಮ ಆಧಾರ್ ಕಾರ್ಡ್ ಬಳಸಿ ಬ್ಯಾಂಕ್ ಖಾತೆಗಳನ್ನು ತೆರೆದು, ಅದರಲ್ಲಿ ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ಮಾಡಲಾಗಿದೆ. ಈ ವಂಚನೆಯಿಂದ ಬರುವ ಲಾಭದಲ್ಲಿ ಶೇ. 15% ರಷ್ಟು ಕಮಿಷನ್ ನಿಮಗೆ ಸಿಗುತ್ತಿದೆ” ಎಂದು ಖದೀಮರು ಹಸಿ ಸುಳ್ಳು ಹೇಳಿ ಹೆದರಿಸಿದ್ದಾರೆ.

ಅಷ್ಟಕ್ಕೇ ಬಿಡದ ವಂಚಕರು, “ನೀವು ಸಹಿ ಮಾಡಿ 45 ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡಿದ್ದೀರಿ. ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಆರ್‌ಬಿಐ (RBI) ಈಗಾಗಲೇ ಸ್ಥಗಿತಗೊಳಿಸಿದೆ” ಎಂದು ಸುಳ್ಳು ಮಾಹಿತಿ ನೀಡಿ, ನಾಗಭೂಷಣ್ ಅವರನ್ನು ಬೆಚ್ಚಿಬೀಳಿಸಿದ್ದಾರೆ.

12 ಗಂಟೆಗಳ ಕಾಲ ‘ಡಿಜಿಟಲ್ ಅರೆಸ್ಟ್’ (Digital Arrest)

ಪೊಲೀಸ್ ಇಲಾಖೆಯ ಹೆಸರಿನಲ್ಲಿ ಮೇ 12 ರ ಮಧ್ಯಾಹ್ನ 3 ಗಂಟೆಯಿಂದ ಮೇ 13 ರ ಮಧ್ಯರಾತ್ರಿ 3 ಗಂಟೆಯವರೆಗೆ, ಬರೋಬ್ಬರಿ 12 ಗಂಟೆಗಳ ಕಾಲ ವಾಟ್ಸಾಪ್ ಕಾಲ್ ಕಟ್ ಮಾಡದಂತೆ ವಂಚಕರು ಸೂಚಿಸಿದ್ದಾರೆ. ಯಾರೊಂದಿಗೂ ಮಾತನಾಡದಂತೆ ನಿರ್ಬಂಧ ವಿಧಿಸಿ ಆನ್‌ಲೈನ್ ಮೂಲಕವೇ ಅವರನ್ನು ‘ಡಿಜಿಟಲ್ ಅರೆಸ್ಟ್’ ಮಾಡಿದ್ದಾರೆ. ಭಯಭೀತರಾದ ನಾಗಭೂಷಣ್, ಅವರು ಹೇಳಿದಂತೆಲ್ಲಾ ಕೇಳಿದ್ದಾರೆ.

ಹಂತ ಹಂತವಾಗಿ 21.50 ಲಕ್ಷ ವರ್ಗಾವಣೆ

ಪೊಲೀಸ್ ಕೇಸ್‌ನಿಂದ ಪಾರಾಗಬೇಕಾದರೆ ನಾವು ಹೇಳುವ ಖಾತೆಗೆ ಹಣ ಜಮೆ ಮಾಡಬೇಕು, ತನಿಖೆ ಮುಗಿದ ಬಳಿಕ ವಾಪಸ್ ನೀಡುತ್ತೇವೆ ಎಂದು ಖದೀಮರು ನಂಬಿಸಿದ್ದಾರೆ. ಭಯಗೊಂಡ ನಾಗಭೂಷಣ್ ಅವರು ಹಾನಗಲ್‌ನ ಎಸ್‌ಬಿಐ (SBI) ಬ್ಯಾಂಕ್ ಶಾಖೆಯಲ್ಲಿದ್ದ ತಮ್ಮ ಖಾತೆಯಿಂದ ಮೇ 18, 2026 ರಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಕೌಂಟ್‌ಗೆ 5,50,000 ರೂ. ಕಳುಹಿಸಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದ ವಂಚಕರು, ಮತ್ತೆ ಬೆದರಿಕೆ ಹಾಕಿ ಮೇ 20 ರಂದು ಯೂನಿಟಿ ಬ್ಯಾಂಕ್‌ನ ಕರೆಂಟ್ ಅಕೌಂಟ್‌ಗೆ 16,00,000 ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಮೇ 12 ರಿಂದ ಮೇ 28 ರ ವರೆಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡಿ, ಬರೋಬ್ಬರಿ 21,50,000 ರೂ.ಗಳನ್ನು ದೋಚಿದ್ದಾರೆ.

ಸೈಬರ್ ಠಾಣೆಯಲ್ಲಿ ದೂರು ದಾಖಲು

ತಾವು ಮೋಸ ಹೋಗಿರುವ ವಿಚಾರ ಅರಿವಿಗೆ ಬರುತ್ತಿದ್ದಂತೆ ನಾಗಭೂಷಣ್ ಅವರು ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ 1930 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಮೇ 30 ರಂದು ಎಲ್ಲಾ ದಾಖಲಾತಿಗಳೊಂದಿಗೆ ಹಾವೇರಿ ಸೈಬರ್ ಪೊಲೀಸ್ ಠಾಣೆಗೆ ತೆರಳಿ, ತಮಗೆ ವಂಚಿಸಿದ ರಣಬೀರ್ ಸಿಂಗ್ ಮತ್ತು ಪ್ರದೀಪ್ ಕುಮಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ವರದಿ: ಮಾರುತಿ ತಳವಾರ, ನೀಡ್ಸ್ ಆಫ್ ಪಬ್ಲಿಕ್

ಈ ಮಾಹಿತಿಗಳನ್ನು ಓದಿ:

WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories