ರಾಣೇಬೆನ್ನೂರು ತಾಲೂಕಿನ ಮೆಡ್ಲೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಲುಮತ ಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳ ಕವಿಗೋಷ್ಠಿ ಆಯೋಜಿಸಲಾಗಿದ್ದು, 15 ವಿದ್ಯಾರ್ಥಿಗಳು ಕವನ ವಾಚಿಸಿದರು.
ಮುಖ್ಯ ಮಾಹಿತಿಗಳು
- ಮೆಡ್ಲೇರಿ ಸರ್ಕಾರಿ ಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಕ್ಕಳ ಕವಿಗೋಷ್ಠಿ ಆಯೋಜನೆ.
- 15 ವಿದ್ಯಾರ್ಥಿ ಕವಿಗಳಿಂದ ಸ್ವರಚಿತ ಕವನಗಳ ವಾಚನ.
- ಕಾವ್ಯ ರಚನೆಗೆ ಲೋಕಜ್ಞಾನ, ಪ್ರತಿಭೆ ಮತ್ತು ರಸಾನುಭವ ಅಗತ್ಯ ಎಂದು ಮಂಜುಳಾ ಹಿರೇಬಿದರಿ ಅಭಿಮತ.
ರಾಣೇಬೆನ್ನೂರು: ಕಾವ್ಯ ರಚನೆಗೆ ಲೋಕಜ್ಞಾನ, ರಸಾನುಭವ ಹಾಗೂ ಪ್ರತಿಭೆ ಅತ್ಯಗತ್ಯ. ಕವಿ ತನ್ನ ಅಂತರಂಗದ ಕಣ್ಣಿನಿಂದ ಜಗತ್ತನ್ನು ನೋಡುತ್ತಾನೆ ಎಂದು ಶಿಕ್ಷಕಿ ಹಾಗೂ ಕವಯಿತ್ರಿ ಮಂಜುಳಾ ಹಿರೇಬಿದರಿ ಹೇಳಿದರು.
ತಾಲೂಕಿನ ಮೆಡ್ಲೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಲುಮತ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೆಡ್ಲೇರಿ ಗ್ರಾಮ ಘಟಕದ ವತಿಯಿಂದ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತೋಚಿದ್ದೆಲ್ಲವನ್ನೂ ಬರೆದರೆ ಅದು ಕವಿತೆಯಾಗುವುದಿಲ್ಲ. ಕಾವ್ಯ ರಚನೆಗೆ ಶ್ರದ್ಧೆ, ಶ್ರಮ, ಕೌಶಲ, ಭಾಷಾ ಜ್ಞಾನ, ಪದಸಂಪತ್ತು, ಸಮಾಜಮುಖಿ ಚಿಂತನೆ ಹಾಗೂ ಔಚಿತ್ಯದ ಅರಿವು ಇರಬೇಕು. ಮಕ್ಕಳು ಹಿರಿಯ ಕವಿಗಳ ಸಾಹಿತ್ಯ ಮತ್ತು ಕವನಗಳನ್ನು ಓದುವ ಮೂಲಕ ಅವರ ಚಿಂತನೆ ಹಾಗೂ ಕಾವ್ಯ ರಚನೆಯ ಶೈಲಿಯನ್ನು ತಿಳಿದುಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಹಾಲುಮತ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಂಜಪ್ಪ ರಾವಳ್ಯಾರ ಉದ್ಘಾಟಿಸಿದರು. ಕಸಾಪ ಮೆಡ್ಲೇರಿ ಗ್ರಾಮ ಘಟಕದ ಅಧ್ಯಕ್ಷ ಮಾರುತಿ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಿಗೋಷ್ಠಿಯಲ್ಲಿ 15 ವಿದ್ಯಾರ್ಥಿ ಕವಿಗಳು ಪಾಲ್ಗೊಂಡು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿ ಮತ್ತು ಸೃಜನಶೀಲ ಅಭಿವ್ಯಕ್ತಿಗೆ ಕಾರ್ಯಕ್ರಮ ವೇದಿಕೆಯಾಯಿತು.
ಈ ಸಂದರ್ಭದಲ್ಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಕಾಂತೇಶ್ ಅಂಬಿಗೇರ, ಶಾಲೆಯ ಮುಖ್ಯ ಶಿಕ್ಷಕಿ ಎಸ್.ಎಲ್. ಹರಿಹರ, ಶಿಕ್ಷಕಿ ಜಿ.ಆರ್. ಅಂಬಿಗೇರ, ಶಿಕ್ಷಕ ಹನುಮಂತ ಚಿತ್ತೇನಹಳ್ಳಿ, ಕರಿಯಪ್ಪ ಹದಡಿ, ರತ್ನಮ್ಮ ಕಂದಾಟಿ, ಎಸ್.ಎಚ್. ಮೇಟಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಮಾರುತಿ ತಳವಾರ್ ಅವರು ‘Needs of Public’ ಜಾಲತಾಣದ ಹಾವೇರಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಬಿಎ, ಬಿ.ಎಡ್ ಹಾಗೂ ಪತ್ರಿಕೋದ್ಯಮದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ಮೊದಲು ಸುಮಾರು ಐದು ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಸಮಾಜಮುಖಿ ವಿಚಾರಗಳು ಮತ್ತು ಜನಪರ ಸಮಸ್ಯೆಗಳ ಕುರಿತು ವಿಶೇಷ ಆಸಕ್ತಿ ಹೊಂದಿದ್ದಾರೆ.
ಸ್ಥಳೀಯ ಆಡಳಿತ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕೃಷಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಆಧರಿಸಿದ ವರದಿಗಳನ್ನು ಸಿದ್ಧಪಡಿಸುವಲ್ಲಿ ಅನುಭವ ಹೊಂದಿರುವ ಇವರು, ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಓದುಗರಿಗೆ ತಲುಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಹಾವೇರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಮುಖ ಬೆಳವಣಿಗೆಗಳು, ಜನಸಮಸ್ಯೆಗಳು ಹಾಗೂ ನೆಲಮಟ್ಟದ ಸುದ್ದಿಗಳನ್ನು ವರದಿ ಮಾಡುವಲ್ಲಿ ವಿಶೇಷ ಒಲವು ಹೊಂದಿದ್ದಾರೆ.


WhatsApp Group




Leave a Reply