Govt order emp

10 ಗಂಟೆಯೊಳಗೆ ಕಚೇರಿಗೆ ಹಾಜರಾಗದ ಸರ್ಕಾರಿ ನೌಕರರ ಮೇಲೆ AI ನಿಗಾ; ರಾಜ್ಯ ಸರ್ಕಾರದ ಹೊಸ ಕ್ರಮ

ಕರ್ನಾಟಕದ ಎಲ್ಲಾ ಸರ್ಕಾರಿ ನೌಕರರು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಿ ‘ಕರ್ತವ್ಯ App’ ನಲ್ಲಿ ಕಡ್ಡಾಯವಾಗಿ ಚೆಕ್-ಇನ್ ಮಾಡಬೇಕು. ತಪ್ಪಿದರೆ ಕೃತಕ ಬುದ್ಧಿಮತ್ತೆ (AI) ಮೂಲಕ ಮೇಲಾಧಿಕಾರಿಗಳಿಗೆ ವರದಿ ರವಾನೆಯಾಗಲಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಹೊಸ ಆದೇಶದ ವಿವರ ಇಲ್ಲಿದೆ…

  • * ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿದಿನ ಬೆಳಗ್ಗೆ 10ರೊಳಗೆ ಹಾಜರಾತಿ ಕಡ್ಡಾಯ.
  • * ಕಚೇರಿ ಪ್ರವೇಶ ಮತ್ತು ನಿರ್ಗಮನದ ವೇಳೆ ಆ್ಯಪ್‌ನಲ್ಲಿ ಚೆಕ್-ಇನ್ ಮಾಡಲೇಬೇಕು.
  • * ತಡವಾಗಿ ಬರುವ ನೌಕರರ ವರದಿ AI ಮೂಲಕ ನೇರವಾಗಿ ಮೇಲಾಧಿಕಾರಿಗಳಿಗೆ ರವಾನೆ.

ಬೆಂಗಳೂರು: ಸರ್ಕಾರಿ ಕಚೇರಿಗಳಿಗೆ ಕೆಲಸದ ನಿಮಿತ್ತ ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಕಾಲದಲ್ಲಿ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹಾಗೂ ಕಠಿಣ ಹೆಜ್ಜೆಯೊಂದನ್ನು ಇಟ್ಟಿದೆ. ಇನ್ಮುಂದೆ ಪ್ರತಿಯೊಬ್ಬ ಸರ್ಕಾರಿ ನೌಕರನೂ ಪ್ರತಿದಿನ ಬೆಳಗ್ಗೆ ಸರಿಯಾಗಿ 10:00 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿದೆ. ಒಂದು ವೇಳೆ ತಡವಾಗಿ ಬಂದರೆ, ಯಾವುದೇ ಮುಲಾಜಿಲ್ಲದೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಸ್ವಯಂಚಾಲಿತವಾಗಿ ಆಯಾ ಇಲಾಖೆಯ ಮುಖ್ಯಸ್ಥರಿಗೆ ಗೈರುಹಾಜರಿಯ ವರದಿ ರವಾನೆಯಾಗಲಿದೆ.

ದಿನಾಂಕ 04-06-2026 ರಂದು ಮಾನ್ಯ ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ, ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಯು ಪ್ರತಿದಿನ ಬೆಳಗ್ಗೆ 10:00 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ತೀರ್ಮಾನದ ಅನ್ವಯ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು 05.06.2026 ರಂದು ಈ ಕುರಿತು ಅತ್ಯಂತ ತುರ್ತು ಮತ್ತು ಕಡ್ಡಾಯದ ಆದೇಶವನ್ನು ಹೊರಡಿಸಿದ್ದಾರೆ…

govvt
Govt 1

ಕರ್ತವ್ಯ App ಬಳಕೆ ಕಡ್ಡಾಯ: ಆಲಸ್ಯಕ್ಕೆ ಬಿದ್ದಿದೆ ಬ್ರೇಕ್!

ಪ್ರಸ್ತುತ ಇ-ಆಡಳಿತ ಇಲಾಖೆಯು ಸಿದ್ಧಪಡಿಸಿರುವ ಕರ್ತವ್ಯ App (Kartavya App) ನಲ್ಲಿ ಈಗಾಗಲೇ HRMS ನಲ್ಲಿ ಲಭ್ಯವಿರುವ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ಮಾಹಿತಿಯನ್ನು ನೋಂದಾಯಿಸಲಾಗಿದೆ. ಆದರೆ, ಬಹಳಷ್ಟು ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಆ್ಯಪ್ ಅನ್ನು ನಿರಂತರವಾಗಿ ಬಳಸುತ್ತಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಾಜರಾತಿ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಿ, ಈ ಕೆಳಗಿನ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ:

  • ಚೆಕ್-ಇನ್ ಮತ್ತು ಚೆಕ್-ಔಟ್ ಕಡ್ಡಾಯ: ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೆಳಗ್ಗೆ 10.00 ಗಂಟೆಗೆ ಕಡ್ಡಾಯವಾಗಿ ‘ಕರ್ತವ್ಯ App’ ನಲ್ಲಿ ‘Check In’ ಮಾಡಬೇಕು ಹಾಗೂ ಕಚೇರಿಯಿಂದ ನಿರ್ಗಮಿಸುವಾಗ ‘Check Out’ ದಾಖಲಿಸಲು ಸೂಚಿಸಲಾಗಿದೆ.
  • AI ಮೂಲಕ ಹೈಟೆಕ್ ನಿಗಾ: ಇ-ಆಡಳಿತ ಇಲಾಖೆಯು ಪ್ರತಿದಿನ ಬೆಳಗ್ಗೆ 10.00 ಗಂಟೆಗೆ ಹಾಜರಾತಿ ದಾಖಲಿಸದ ಅಧಿಕಾರಿ ಮತ್ತು ಸಿಬ್ಬಂದಿಗಳ ಜಿಲ್ಲಾವಾರು ಹಾಗೂ ಕಚೇರಿವಾರು ಮಾಹಿತಿಯನ್ನು ಕೃತಕ ಬುದ್ಧಿಮತ್ತೆ (AI) ತಂತ್ರಾಂಶದ ಮೂಲಕ ಆಯಾ ಇಲಾಖಾ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ ಕಳುಹಿಸಲಿದೆ. ಇದರಿಂದ ಯಾರು ಲೇಟಾಗಿ ಬಂದಿದ್ದಾರೆ ಎನ್ನುವುದು ಕ್ಷಣಾರ್ಧದಲ್ಲಿ ಮೇಲಾಧಿಕಾರಿಗಳಿಗೆ ತಿಳಿಯಲಿದೆ.
  • ಮೇಲಧಿಕಾರಿಗಳ ದೈನಂದಿನ ಪರಿಶೀಲನೆ: ಎಲ್ಲಾ ಇಲಾಖೆಯ ಮುಖ್ಯಸ್ಥರು ತಮ್ಮ ವೈಯಕ್ತಿಕ ಲಾಗಿನ್ (Login) ಮೂಲಕ ಕರ್ತವ್ಯ ಡ್ಯಾಶ್‌ಬೋರ್ಡ್‌ನಲ್ಲಿ ಪ್ರತಿದಿನ ಕಡ್ಡಾಯವಾಗಿ ಹಾಜರಾತಿಯ ವರದಿಯನ್ನು ಪರಿಶೀಲಿಸಬೇಕು ಹಾಗೂ ಹಾಜರಾತಿ ದಾಖಲಿಸದವರಿಗೆ ಸೂಕ್ತ ಸೂಚನೆಯನ್ನು ನೀಡಬೇಕು ಎಂದು ಆದೇಶಿಸಲಾಗಿದೆ.

ಪ್ರವಾಸದಲ್ಲಿದ್ದರೆ OOD ದಾಖಲಿಸುವುದು ಕಡ್ಡಾಯ

ಹಲವು ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಕಚೇರಿ ಕೆಲಸದ ನಿಮಿತ್ತ ಹೊರಗಡೆ ಪ್ರವಾಸದಲ್ಲಿರುತ್ತಾರೆ (Official Duty). ಇಂತಹ ಸಂದರ್ಭದಲ್ಲಿಯೂ ಹಾಜರಾತಿಯಿಂದ ವಿನಾಯಿತಿ ಇಲ್ಲ. ಒಂದು ವೇಳೆ ಸಿಬ್ಬಂದಿಗಳು ಕಛೇರಿ ಕರ್ತವ್ಯದ ಮೇಲೆ ಪ್ರವಾಸದಲ್ಲಿದ್ದರೆ, ಅಲ್ಲೇ ಆ್ಯಪ್‌ನಲ್ಲಿರುವ ‘OOD option’ ನಲ್ಲಿ ಪ್ರವಾಸದ ಉದ್ದೇಶವನ್ನು ನಮೂದಿಸಿ ಹಾಜರಾತಿಯನ್ನು ದಾಖಲಿಸಲು ಸೂಚಿಸಲಾಗಿದೆ. ಹಾಗೂ ಇದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ದೃಢೀಕರಿಸುವುದು ಕಡ್ಡಾಯವಾಗಿದೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ

ಈ ಆದೇಶವನ್ನು ಅತ್ಯಂತ ತುರ್ತು ಮತ್ತು ಕಡ್ಡಾಯವೆಂದು ಪರಿಗಣಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (CEO) ಈ ಪ್ರತಿಯನ್ನು ರವಾನಿಸಿದ್ದಾರೆ.

ಒಟ್ಟಾರೆಯಾಗಿ, ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಅವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ರಾಜ್ಯ ಸರ್ಕಾರ ತಂತ್ರಜ್ಞಾನದ ಮೊರೆ ಹೋಗಿದ್ದು, ತಡವಾಗಿ ಬರುವ ಆಲಸಿ ನೌಕರರಿಗೆ ಇನ್ಮುಂದೆ ‘ಕೃತಕ ಬುದ್ಧಿಮತ್ತೆ’ಯ ಬಿಸಿ ತಟ್ಟುವುದು ಖಚಿತವಾಗಿದೆ.

ವರದಿ: ಶಿವರಾಜ್, ನೀಡ್ಸ್ ಆಫ್ ಪಬ್ಲಿಕ್

ಈ ಮಾಹಿತಿಗಳನ್ನು ಓದಿ:

WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories