ಪ್ರತಿ ವರ್ಷದಂತೆ ಈ ವರ್ಷ ಸುಮ್ಮನೆ ಪರೀಕ್ಷೆ ಬರೆದು ಪಾಸ್ ಆಗೋಕಾಗಲ್ಲ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) 2026ರ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ (Practical) ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಷ್ಟೇ ಅಲ್ಲ, ಈ ಬಾರಿ ಮೌಲ್ಯಮಾಪನದಲ್ಲಿ ಭಾರೀ ಬದಲಾವಣೆ ಮಾಡಿದೆ. ಯಾಕೆ ಗೊತ್ತಾ? ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಹೀಗಿದೆ
ಅಧಿಕೃತ ಪ್ರತಿಗಳು ಕೊನೆಯ ಭಾಗದಲ್ಲಿವೆ
ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಪ್ರತಿ ವರ್ಷ ನಡೆಸಲಾಗುತ್ತಿದ್ದಂತೆಯೇ ಪ್ರಾಯೋಗಿಕ ಪರೀಕ್ಷೆಗಳನ್ನು 2026ರ ಜನವರಿ ಮತ್ತು ಫೆಬ್ರವರಿ ಮಾಹೆಯಲ್ಲಿ ದಿನಾಂಕ: 27-01-2026 ರಿಂದ 14-02-2026 ರವರೆಗೆ ನಡೆಸುವ ಸಂಪೂರ್ಣ ಜವಾಬ್ದಾರಿಯು ಆಯಾ ಜಿಲ್ಲಾ ಉಪನಿರ್ದೇಶಕರದ್ದಾಗಿರುತ್ತದೆ.
ಪ್ರಾಯೋಗಿಕ ಪರೀಕ್ಷೆಗಳಿರುವ ವಿಷಯಗಳಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆದು ತಾತ್ವಿಕ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳನ್ನು ಪಡೆಯುತ್ತಿರುವುದು ಮಂಡಲಿಯ ಗಮನಕ್ಕೆ ಬಂದಿರುತ್ತದೆ. ಇದು ಪ್ರಾಯೋಗಿಕ ಪರೀಕ್ಷೆಗಳ ಮೌಲ್ಯಮಾಪನದ ಪಾವಿತ್ರ್ಯತೆಯ ಬಗ್ಗೆ ಸಂದೇಹ ಮೂಡಿಸುತ್ತದೆ. ಇದನ್ನು ಮಂಡಲಿಯು ಗಂಭೀರವಾಗಿ ಪರಿಗಣಿಸಿದ್ದು 2025-26ರ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವಲ್ಲಿ ಈ ಕೆಳಗಿನ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾ ಉಪನಿರ್ದೇಶಕರುಗಳಿಗೆ ಸೂಚಿಸಿದೆ.
ಜಿಲ್ಲಾ ಉಪನಿರ್ದೇಶಕರುಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು:-
1. 2026ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಈಗಾಗಲೇ ಮಂಡಲಿಯಿಂದ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳ ಪಟ್ಟಿಯನುಸಾರ ಜಿಲ್ಲಾ ಹಂತದಲ್ಲಿ ವೇಳಾಪಟ್ಟಿಯನ್ನು ಸಿದ್ದಪಡಿಸಿ ನಿಗದಿತ ಅವಧಿಯೊಳಗೆ ಪ್ರಾಯೋಗಿಕ ಪರೀಕ್ಷೆಯನ್ನು ಮಂಡಲಿಯ ನಿಯಮಾನುಸಾರ ನಡೆಸುವುದು.
2. ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲು ಆಯಾ ಜಿಲ್ಲೆಯ ವಿಜ್ಞಾನ ವಿಷಯದ ಒಬ್ಬರು ಪ್ರಾಂಶುಪಾಲರನ್ನು ಪ್ರತಿ ವಿಷಯಕ್ಕೆ ಸಂಚಾಲಕರನ್ನಾಗಿ ಹಾಗೂ ಪ್ರತಿ ಪ್ರಾಯೋಗಿಕ ವಿಷಯಕ್ಕೆ ಗರಿಷ್ಠ ಇಬ್ಬರು ಹಿರಿಯ ವಿಜ್ಞಾನ ಉಪನ್ಯಾಸಕರನ್ನು ಸದಸ್ಯರನ್ನಾಗಿ ಒಳಗೊಂಡ ಒಂದು ಜಿಲ್ಲಾ ಪ್ರಾಯೋಗಿಕ ಪರೀಕ್ಷಾ ಸಮಿತಿಯನ್ನು ರಚಿಸಬೇಕು.
3. ಜಿಲ್ಲಾ ಪ್ರಾಯೋಗಿಕ ಪರೀಕ್ಷಾ ಸಮಿತಿಯು ಜಿಲ್ಲೆಯ ಎಲ್ಲಾ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳ ವೇಳಾಪಟ್ಟಿಯನ್ನು ತಯಾರಿಸುವುದು ಹಾಗೂ ಆಂತರಿಕ ಮತ್ತು ಬಾಹ್ಯ ಪರೀಕ್ಷಕರನ್ನು ಪಾರದರ್ಶಕವಾಗಿ ಮಂಡಲಿಯ ನಿಯಮಗಳಿಗನುಸಾರವಾಗಿ ನೇಮಿಸಬೇಕು. ಪ್ರಾಯೋಗಿಕ ಪರೀಕ್ಷೆಯಲ್ಲಿ ಸೂಚನೆಯಂತೆ ಹಾಗೂ ಅಂಕಪಟ್ಟಿಯಂತೆ ತಂಡಗಳನ್ನು ಮಾಡಿ ವೇಳಾಪಟ್ಟಿಯನ್ನು ನೀಡಿದ ನಂತರ ನಿಗದಿತ ತಂಡದ ವಿದ್ಯಾರ್ಥಿಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗೆ ಅವಕಾಶ ನೀಡಬಾರದು.
4. ಆಂತರಿಕ ಮತ್ತು ಬಾಹ್ಯ ಪರೀಕ್ಷಕರನ್ನು ನೇಮಿಸುವಾಗ ಪ್ರಾಯೋಗಿಕ ಪರೀಕ್ಷಾ ಸಮಿತಿಯವರು ಸಂಬಂಧಪಟ್ಟ ಕಾಲೇಜುಗಳಿಂದ ಈಗಾಗಲೇ ಮಂಡಲಿಯ Evaluators Portal ನಲ್ಲಿ ನೋಂದಣಿಯಾಗಿರುವ ಉಪನ್ಯಾಸಕರ ಚೆಕ್‌ಲಿಸ್ಟ್ ಪಡೆದು, ನೋಂದಣಿಯಾಗಿ Evaluator’s Code ಅನ್ನು ಹೊಂದಿದ ಉಪನ್ಯಾಸಕರುಗಳನ್ನು ಮಾತ್ರ ಪ್ರಾಯೋಗಿಕ ಪರೀಕ್ಷಕರನ್ನಾಗಿ ನೇಮಿಸುವುದು.
5. ಒಂದು ಪ್ರಾಯೋಗಿಕ ಪರೀಕ್ಷಾ ಕೇಂದ್ರದಲ್ಲಿ ಆಂತರಿಕ ಪರೀಕ್ಷಕರಾಗಿ ಒಬ್ಬ ಉಪನ್ಯಾಸಕರನ್ನು ಗರಿಷ್ಠ ನಾಲ್ಕು ದಿನಗಳಿಗೆ (12 ತಂಡಗಳಿಗೆ) ಮಾತ್ರ ನೇಮಕ ಮಾಡುವುದು. ಆ ಪರೀಕ್ಷಾ ಕೇಂದ್ರದಲ್ಲಿ ಆಂತರಿಕ ಪರೀಕ್ಷಕರ ಲಭ್ಯತೆಯಿಲ್ಲದಿದ್ದಲ್ಲಿ ಇಬ್ಬರು ಬಾಹ್ಯ ಪರೀಕ್ಷಕರನ್ನು ನೇಮಕ ಮಾಡುವುದು.
6. ಆಂತರಿಕ ಮತ್ತು ಬಾಹ್ಯ ಪರೀಕ್ಷಕರ ನೇಮಕಾತಿ ಪಟ್ಟಿಯನ್ನು ಕಡ್ಡಾಯವಾಗಿ ಜಂಟಿ ನಿರ್ದೇಶಕರು (ಪಿಯು ಪರೀಕ್ಷೆ), ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 003 ಇವರಿಗೆ ಸಲ್ಲಿಸುವುದು.
7. ಸೂಕ್ಷ್ಮ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಅನುದಾನ ರಹಿತ ಕಾಲೇಜುಗಳ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನಾಗಿ ಸರ್ಕಾರಿ/ಅನುದಾನಿತ ಕಾಲೇಜಿನ ಪ್ರಾಂಶುಪಾಲರು (ವಿಜ್ಞಾನ ವಿಷಯ)/ವಿಜ್ಞಾನ ವಿಭಾಗದ ಹಿರಿಯ ಉಪನ್ಯಾಸಕರನ್ನು ನೇಮಿಸುವುದು.
8. ಅನುದಾನ ರಹಿತ ಕಾಲೇಜುಗಳಿಗೆ ಸರ್ಕಾರಿ/ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳನ್ನೇ ಬಾಹ್ಯ ಪರೀಕ್ಷಕರನ್ನಾಗಿ ನೇಮಕ ಮಾಡುವುದು.
9. ಪ್ರಾಯೋಗಿಕ ಪರೀಕ್ಷೆಯನ್ನು ನಿರ್ದಿಷ್ಟ ಪ್ರಯೋಗಗಳಿಗೆ ಮಾತ್ರ ಸೀಮಿತಗೊಳಸದೇ, ಪಠ್ಯಕ್ರಮದಲ್ಲಿ ನಿಗದಿಪಡಿಸಿರುವ ಎಲ್ಲಾ ಪ್ರಯೋಗಗಳನ್ನೊಳಗೊಂಡಂತೆ ಪರೀಕ್ಷೆಯನ್ನು ನಡೆಸಲು ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರುಗಳಿಗೆ ಅಗತ್ಯ ಸೂಚನೆಗಳನ್ನು ನೀಡುವುದು. ಈ ಬಗ್ಗೆ ಪ್ರಾಯೋಗಿಕ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರುಗಳಿಂದ ದೃಢೀಕರಣ ಪಡೆಯುವುದು.
10. ಬಾಹ್ಯ ಪರೀಕ್ಷಕರನ್ನಾಗಿ ನೇಮಕ ಮಾಡುವಾಗ ಮೊದಲ ಆದ್ಯತೆಯನ್ನು ಸರ್ಕಾರಿ ಕಾಲೇಜುಗಳ ಉಪನ್ಯಾಸಕರಿಗೆ, ನಂತರ ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ನೀಡುವುದು. ಬಾಹ್ಯ ಪರೀಕ್ಷಕರ ಕೊರತೆ ಇದ್ದಲ್ಲಿ ಮಾತ್ರ ಅನುದಾನ ರಹಿತ ಕಾಲೇಜುಗಳ ಉಪನ್ಯಾಸಕರುಗಳನ್ನು ನೇಮಿಸಿಕೊಳ್ಳಬಹುದು. ಪರೀಕ್ಷಾ ಕೇಂದ್ರದಲ್ಲಿ ಬಾಹ್ಯ ಪರೀಕ್ಷಕರನ್ನು ನೇಮಕ ಮಾಡುವಾಗ ಪುನರಾವರ್ತನೆಯಾಗದಂತೆ ಕ್ರಮ ವಹಿಸುವುದು. ಯಾವುದೇ ಕಾರಣಕ್ಕೂ ಎರಡು ಪರೀಕ್ಷಾ ಕೇಂದ್ರಗಳ ಉಪನ್ಯಾಸಕರನ್ನು ಪರಸ್ಪರ ಬದಲಾಯಿಸಿ ಪರೀಕ್ಷಕರನ್ನಾಗಿ ನೇಮಕ ಮಾಡಬಾರದು.
11. ಪ್ರತಿ ದಿವಸ ಪ್ರತಿ ತಂಡದ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವಾಗ ಬಾಹ್ಯ ಮತ್ತು ಆಂತರಿಕ ಪರೀಕ್ಷಕರು ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮೊದಲೇ ಹಾಜರಿರಲು ಸೂಚಿಸುವುದು.
12. ಪ್ರಾಯೋಗಿಕ ಪರೀಕ್ಷೆಗಳ ಅಂಕಗಳನ್ನು ಪರೀಕ್ಷಾ ಕೇಂದ್ರಗಳಿಂದಲೇ ಆನ್‌ಲೈನ್ ಮುಖಾಂತರ ಮಂಡಲಿಯ ಸರ್ವಗ್ರಳಿಗೆ ಇಂದೀಕರಿಸಬೇಕಿದ್ದು, ಸದರಿ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯವಿರುವ ಎಲ್ಲಾ ತಾಂತ್ರಿಕ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸೂಚಿಸುವುದು.
13. 2026ರ ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಪಿಯು ಪರೀಕ್ಷಾ ಪೋರ್ಟಲ್ ಲಾಗಿನ್‌ಲ್ಲಿ ಪ್ರವೇಶ ಪತ್ರಗಳನ್ನು ಮಂಡಲಿಯಿಂದ ಲಭ್ಯಗೊಳಿಸಲಾಗುವುದು. ಸದರಿ ಪ್ರವೇಶ ಪತ್ರಗಳನ್ನು ಮುದ್ರಿಸಿ ಪರೀಕ್ಷಾ ದಿನಾಂಕ, ಸಮಯ ಮತ್ತು ತಂಡದ ಸಂಖ್ಯೆಗಳನ್ನು ನಮೂದಿಸಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ವಿತರಿಸುವಂತೆ ಆಯಾ ಕಾಲೇಜಿನ ಪ್ರಾಂಶುಪಾಲರುಗಳಿಗೆ ಸೂಚಿಸುವುದು.
14. ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲೆಯ ಎಲ್ಲಾ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವುದು ಹಾಗೂ ಸೂಕ್ಷ್ಮ ಕೇಂದ್ರಗಳಿಗೆ ಹೆಚ್ಚು ಭಾರಿ ಭೇಟಿ ನೀಡಿ ಸದರಿ ವರದಿಯನ್ನು ಜಂಟಿ ನಿರ್ದೇಶಕರು (ಪಿಯು ಪರೀಕ್ಷೆ), ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 003 ರವರಿಗೆ ಸಲ್ಲಿಸುವುದು.
| ವಿಷಯ | ವಿವರಗಳು |
|---|---|
| ಪರೀಕ್ಷೆ ಆರಂಭ | 27-01-2026 (ಮಂಗಳವಾರ) |
| ಪರೀಕ್ಷೆ ಮುಕ್ತಾಯ | 14-02-2026 (ಶನಿವಾರ) |
| ಹಾಲ್ ಟಿಕೆಟ್ | ಕಾಲೇಜಿನ ಪ್ರಾಂಶುಪಾಲರಿಂದ ಪಡೆಯಬೇಕು |
| ನಿಯಮ | ಬ್ಯಾಚ್ ಬದಲಾವಣೆ ಮತ್ತು ಎಕ್ಸ್‌ಚೇಂಜ್‌ಗೆ ಅವಕಾಶವಿಲ್ಲ |









ಗಮನಿಸಿ: ನಿಮ್ಮ ಪ್ರಾಯೋಗಿಕ ಪರೀಕ್ಷೆಯ ದಿನಾಂಕ, ಸಮಯ ಮತ್ತು ಬ್ಯಾಚ್ ಸಂಖ್ಯೆ ಇರುವ ಪ್ರವೇಶ ಪತ್ರವನ್ನು (Hall Ticket) ಕಾಲೇಜಿನ ಪ್ರಾಂಶುಪಾಲರು ಕಡ್ಡಾಯವಾಗಿ ನೀಡಲಿದ್ದಾರೆ. ಅದನ್ನು ಪಡೆದುಕೊಂಡೇ ಪರೀಕ್ಷೆಗೆ ಹಾಜರಾಗಿ.
“ವಿದ್ಯಾರ್ಥಿಗಳೇ, ‘ನಮ್ಮ ಕಾಲೇಜಿನ ಸಾರ್ ಅಲ್ವಾ, ಮಾರ್ಕ್ಸ್ ಹಾಕ್ತಾರೆ ಬಿಡಿ’ ಅನ್ನೋ ಭ್ರಮೆಯಲ್ಲಿ ಇರಬೇಡಿ. ಈ ಬಾರಿ ಹೊರಗಿನಿಂದ ಬರುವ ಎಕ್ಸ್‌ಟರ್ನಲ್ ಎಕ್ಸಾಮಿನರ್ಸ್ ಸರ್ಕಾರಿ ಕಾಲೇಜಿನವರೇ ಆಗಿರುತ್ತಾರೆ ಮತ್ತು ನಿಯಮಗಳು ಕಠಿಣವಾಗಿರುತ್ತವೆ. ರೆಕಾರ್ಡ್ ಬುಕ್ ಮತ್ತು ಪ್ರಯೋಗಗಳನ್ನು ಸರಿಯಾಗಿ ಪ್ರಾಕ್ಟೀಸ್ ಮಾಡಿ ಹೋಗಿ.”
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)
ಪ್ರಶ್ನೆ 1: ನನಗೆ ನಿಗದಿ ಮಾಡಿದ ದಿನಾಂಕದಂದು ಪರೀಕ್ಷೆಗೆ ಹೋಗಲು ಆಗದಿದ್ದರೆ, ಬೇರೆ ಬ್ಯಾಚ್‌ನಲ್ಲಿ ಬರೆಯಬಹುದಾ?
ಉತ್ತರ: ಇಲ್ಲ. ಮಂಡಳಿಯ ಹೊಸ ನಿಯಮದ ಪ್ರಕಾರ, ಒಮ್ಮೆ ವೇಳಾಪಟ್ಟಿ ಮತ್ತು ಬ್ಯಾಚ್ ನಿಗದಿಯಾದ ನಂತರ ಅದರಲ್ಲಿ ಯಾವುದೇ ಬದಲಾವಣೆಗೆ ಅವಕಾಶ ನೀಡಬಾರದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ಪ್ರಶ್ನೆ 2: ಪ್ರಾಯೋಗಿಕ ಪರೀಕ್ಷೆಯ ಹಾಲ್ ಟಿಕೆಟ್ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದಾ?
ಉತ್ತರ: ಇಲ್ಲ. ಹಾಲ್ ಟಿಕೆಟ್ ಕಾಲೇಜಿನ ಲಾಗಿನ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಪ್ರಾಂಶುಪಾಲರು ಅದನ್ನು ಪ್ರಿಂಟ್ ತೆಗೆದು, ಸಹಿ ಹಾಕಿ ನಿಮಗೆ ನೀಡುತ್ತಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




